ನವದೆಹಲಿ:ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಾತನಾಡಿದರು.
ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ‘ಪ್ರಧಾನಮಂತ್ರಿ ಸಂಗ್ರಹಾಲಯ’ವನ್ನು ಮೋದಿ ಈ ವೇಳೆ ಬಣ್ಣಿಸಿದರು. ಮಕ್ಕಳಿಗೆ ವೇದಗಣಿತ ಬೋಧಿಸುವಂತೆಯೂ, ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡುವಂತೆಯೂ, ಜಲ ಸಂರಕ್ಷಣೆಯ ಸಂಕಲ್ಪ ಮಾಡುವಂತೆಯೂ ಅವರು ನಾಗರಿಕರಿಗೆ ಸಲಹೆ ನೀಡಿದರು. ಜತೆಗೆ ಕೋವಿಡ್ ಮುಂಜಾಗ್ರತೆ ಬಗ್ಗೆ ಜನರನ್ನು ಅವರು ಮತ್ತೊಮ್ಮೆ ಎಚ್ಚರಿಸಿದರು.
‘ದೇಶಕ್ಕೆ 'ಪ್ರಧಾನಮಂತ್ರಿ ವಸ್ತುಸಂಗ್ರಹಾಲಯ' ಸಿಕ್ಕಿದೆ. ಅದನ್ನು ದೇಶದ ಜನರಿಗಾಗಿಯೇ ಸ್ಥಾಪಿಸಲಾಗಿದೆ. ನಾವು ನಮ್ಮ ಪ್ರಧಾನಿಗಳ ಕೊಡುಗೆಗಳನ್ನು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂಥ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇವೆ ಎಂಬುದು ಹೆಮ್ಮೆಯ ವಿಷಯ. ವಸ್ತು ಸಂಗ್ರಹಾಲಯ ದೇಶದ ಯುವಕರನ್ನು ನಮ್ಮ ನಾಯಕರೊಂದಿಗೆ ಅವರೊಂದಿಗೆ ಸಂಪರ್ಕಿಸುತ್ತಿದೆ. ಜನರು ಅನೇಕ ವಸ್ತುಗಳನ್ನು ಸಂಗ್ರಹಾಲಯಗಳಿಗೆ ಕೊಡುಗೆ ನೀಡುತ್ತಿದ್ದಾರೆ. ಭಾರತದ ಸಾಂಸ್ಕೃತಿಕ ಪರಂಪರೆಗೆ ಅವುಗಳನ್ನು ಸೇರಿಸುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಸ್ತುಸಂಗ್ರಹಾಲಯಗಳ ಡಿಜಿಟಲೀಕರಣದ ಕಡೆಗೆ ಹೆಚ್ಚಿನ ಗಮನ ನೀಡಲಾಗಿದೆ. ಮುಂಬರುವ ರಜಾದಿನಗಳಲ್ಲಿ ಯುವಜನರು ತಮ್ಮ ಸ್ನೇಹಿತರೊಂದಿಗೆ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಬೇಕು' ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ಏಪ್ರಿಲ್ 14ರಂದು ‘ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ’ವನ್ನು ನವದೆಹಲಿ ಉದ್ಘಾಟಿಸಿದ್ದರು. ಮತ್ತು, ತಾವೇ ಮೊದಲ ಟಿಕೆಟ್ ಪಡೆದು ಸಂಗ್ರಹಾಲಯದಲ್ಲಿ ಸುತ್ತು ಹಾಕಿದ್ದರು.
ಯುಪಿಐ ಪಾವತಿಗೆ ಆದ್ಯತೆ ನೀಡಲು ಕರೆ
ಜನರು 'ಕ್ಯಾಶ್‌ಲೆಸ್’ ವ್ಯವಹಾರಕ್ಕೆ ಆದ್ಯತೆ ನೀಡಬೇಕು. ಈಗ ಸಣ್ಣ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಜನರು ಯುಪಿಐ ಬಳಸುತ್ತಿದ್ದಾರೆ. ಇದು ವ್ಯಾಪಾರಿಗಳು ಮತ್ತು ಗ್ರಾಹಕರಿಬ್ಬರಿಗೂ ಅನುಕೂಲಕಾರಿ. ಆನ್‌ಲೈನ್ ಪಾವತಿಯು ಡಿಜಿಟಲ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರತಿದಿನ ₹20,000 ಕೋಟಿ ಮೊತ್ತದ ಆನ್‌ಲೈನ್ ವಹಿವಾಟು ನಡೆಯುತ್ತಿವೆ‘ ಎಂದು ಅವರು ತಿಳಿಸಿದರು.
ಜಲ ಸಂರಕ್ಷಣೆಗೆ ಸಲಹೆ
‘ಸ್ನೇಹಿತರೇ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಮಯದಲ್ಲಿ, ದೇಶದ ಸಂಕಲ್ಪಗಳಲ್ಲಿ ಜಲ ಸಂರಕ್ಷಣೆಯು ಒಂದಾಗಿರಲಿ. ನೀರು ಪ್ರತಿಯೊಂದು ಜೀವಿಗಳ ಮೂಲಭೂತ ಅಗತ್ಯ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದು ಪ್ರಮುಖ ನೈಸರ್ಗಿಕ ಸಂಪನ್ಮೂಲ. ವಾಲ್ಮೀಕಿ ರಾಮಾಯಣದಲ್ಲಿ ಜಲ ಸಂರಕ್ಷಣೆಗೆ ಒತ್ತು ನೀಡಲಾಗಿತ್ತು. ಹರಪ್ಪ ನಾಗರಿಕತೆಯ ಸಮಯದಲ್ಲಿ, ನೀರನ್ನು ಉಳಿಸಲು ಸುಧಾರಿತ ಎಂಜಿನಿಯರಿಂಗ್ ವ್ಯವಸ್ಥೆಯೂ ಇತ್ತು. ಎಲ್ಲರೂ ನೀರು ಉಳಿಸುವ ಮೂಲಕ ಜೀವಗಳನ್ನು ಉಳಿಸೋಣ’ ಎಂದು ಅವರು ಹೇಳಿದರು.
ವೇದ ಗಣಿತ ಕಲಿಸಿ
ಗಣಿತಕ್ಕೆ ಭಾರತ ನೀಡಿದ ಕೊಡುಗೆಯನ್ನೂ ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಸ್ಮರಿಸಿದರು. ‘ಗಣಿತಶಾಸ್ತ್ರವು ಭಾರತೀಯರಿಗೆ ಅಪ್ಯಾಯಮಾನವಾದ ವಿಷಯ. ಭಾರತೀಯರಾದ ನಮಗೆ ಗಣಿತವು ಎಂದಿಗೂ ಕಷ್ಟಕರವಾದ ವಿಷಯವಾಗಿರಲಿಲ್ಲ. ಇದಕ್ಕೆ ನಮ್ಮ ವೇದ ಗಣಿತವೂ ಕಾರಣ. ನಾಗರಿಕರು ತಮ್ಮ ಮಕ್ಕಳಿಗೆ ವೇದ ಗಣಿತವನ್ನು ಕಲಿಸಬೇಕು. ವೇದ ಗಣಿತದಿಂದ ಮಕ್ಕಳ ಆತ್ಮವಿಶ್ವಾಸ ವೃದ್ಧಿಯಾಗುವುದು ಮಾತ್ರವಲ್ಲ, ಅವರ ವಿಶ್ಲೇಷಣಾ ಸಾಮರ್ಥವೂ ವೃದ್ಧಿಯಾಗುತ್ತದೆ. ಮಕ್ಕಳಲ್ಲಿ ಗಣಿತದ ಬಗ್ಗೆ ಇರುವ ಅಲ್ಪ ಪ್ರಮಾಣದ ಭಯವನ್ನು ವೇದಗಣಿತ ಹೋಗಲಾಡಿಸುತ್ತದೆ’ ಎಂದು ಮೋದಿ ಹೇಳಿದರು.
‘ಈಗ ವಿಜ್ಞಾನಿಗಳು 'ಎವೆರಿಥಿಂಗ್ ಥಿಯರಿ' ಬಗ್ಗೆ ಚರ್ಚಿಸುತ್ತಿದ್ದಾರೆ. ಅದರಲ್ಲಿ, ಬ್ರಹ್ಮಾಂಡದಲ್ಲಿರುವ ಎಲ್ಲವನ್ನೂ ಒಟ್ಟುಗೂಡಿಸಬಹುದಾಗಿದೆ. ಆದರೆ, ಭಾರತವು ಗಣಿತ ಶಾಸ್ತ್ರಕ್ಕೆ ‘ಸೊನ್ನೆ’ಯನ್ನು ಕೊಡುಗೆಯಾಗಿ ನೀಡಿದೆ. ಈ ಮೂಲಕ ಅನಂತತೆಯ ಕಲ್ಪನೆಯನ್ನು ನಾವು ಅನ್ವೇಷಿಸಿದ್ದೇವೆ. ವೇದಗಳಲ್ಲಿ ಗಣಿತಶಾಸ್ತ್ರದ ಎಣಿಕೆಯು ಬಿಲಿಯನ್ ಮತ್ತು ಟ್ರಿಲಿಯನ್‌ಗಳನ್ನು ಮೀರುವಂಥದ್ದು’ ಎಂದು ಮೋದಿ ಹೇಳಿದರು.
‘ಇದೆಲ್ಲದರ ನಡುವೆಯೂ ನಾವು ಕೊರೊನಾದ ಬಗ್ಗೆ ಎಚ್ಚರದಿಂದಿರಬೇಕು. ಸೋಂಕು ನಿಯಂತ್ರಣಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಅವರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.