ADVERTISEMENT

ಹಿಂಜರಿಕೆ ಬೇಡ, ಎಲ್ಲರೂ ಲಸಿಕೆ ಪಡೆಯಿರಿ: ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 7:13 IST
Last Updated 27 ಜೂನ್ 2021, 7:13 IST
ನರೇಂದ್ರ ಮೋದಿ (ಪಿಟಿಐ ಚಿತ್ರ)
ನರೇಂದ್ರ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ಕೋವಿಡ್ ಲಸಿಕೆ ಪಡೆಯಲು ಯಾರೂ ಹಿಂಜರಿಕೆ ಮಾಡಬಾರದು. ದಯವಿಟ್ಟು ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕೀ ಬಾತ್‌’ನಲ್ಲಿ ಭಾನುವಾರ ಮಾತನಾಡಿದ ಅವರು ದೇಶದ ಲಸಿಕಾ ಅಭಿಯಾನವನ್ನು ಶ್ಲಾಘಿಸಿದ್ದಾರೆ.

‘ದಯಮಾಡಿ ಹೆದರಿಕೆ ಬಿಡಿ. ಕೆಲವೊಮ್ಮೆ ಲಸಿಕೆ ಪಡೆದ ಬಳಿಕ ಜ್ವರ ಬರಬಹುದು. ಅದು ಸೌಮ್ಯವಾಗಿರುವುದಲ್ಲದೆ ಕೆಲವು ಗಂಟೆಗಳ ಬಳಿಕ ಕಡಿಮೆಯಾಗುತ್ತದೆ. ಲಸಿಕೆ ಪಡೆಯದೇ ಇರುವುದು ಅಪಾಯಕಾರಿ. ಇದರಿಂದ ನಿಮ್ಮನ್ನು ನೀವು ಅಪಾಯಕ್ಕೆ ಒಡ್ಡಿಕೊಳ್ಳುವುದಲ್ಲದೆ ನಿಮ್ಮ ಕುಟುಂಬದವರು ಮತ್ತು ಇಡೀ ಗ್ರಾಮವನ್ನೇ ಅಪಾಯಕ್ಕೆ ಸಿಲುಕಿಸುತ್ತೀರಿ’ ಎಂದು ಮೋದಿ ಹೇಳಿದರು.

ಮಧ್ಯ ಪ್ರದೇಶದ ಬೈತೂಲ್ ಜಿಲ್ಲೆಯ ದುಲಾರಿಯಾ ಗ್ರಾಮದ ಜನರ ಜತೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿಯವರು, ಲಸಿಕೆ ಕುರಿತು ಗ್ರಾಮಸ್ಥರಲ್ಲಿ ಇರುವ ಹಿಂಜರಿಕೆ ತೊಲಗಿಸಲು ಯತ್ನಿಸಿದರು.

ತಾವು ಮತ್ತು ತಮ್ಮ 100 ವರ್ಷ ವಯಸ್ಸಿನ ತಾಯಿ ಲಸಿಕೆಯ ಎರಡೂ ಡೋಸ್ ಪಡೆದಿರುವುದಾಗಿಯೂ ಹೇಳಿದ ಮೋದಿ, ವದಂತಿಗಳನ್ನು ನಂಬದೆ ವಿಜ್ಞಾನಿಗಳ ಮಾತಿನ ಮೇಲೆ ನಂಬಿಕೆ ಇರಿಸುವಂತೆ ಜನರಲ್ಲಿ ಮನವಿ ಮಾಡಿದರು.

ಮಿಲ್ಖಾ ಸಿಂಗ್‌ಗೆ ನುಡಿ ನಮನ

ಇತ್ತೀಚೆಗೆ ನಿಧನರಾದ ಒಲಿಂಪಿಯನ್ ಅಥ್ಲೀಟ್ ಮಿಲ್ಖಾ ಸಿಂಗ್ ಅವರಿಗೆ ನುಡಿ ನಮನ ಸಲ್ಲಿಸಿದ ಮೋದಿ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತೆರಳುವ ಎಲ್ಲ ಕ್ರೀಡಾಳುಗಳಿಗೆ ಶುಭ ಹಾರೈಸಿದರು.

‘ಒಲಿಂಪಿಕ್ಸ್ ಬಗ್ಗೆ ಮಾತನಾಡುವಾಗ ಮಿಲ್ಖಾ ಸಿಂಗ್ ಜೀ ಅವರನ್ನು ನೆನಪಿಸದೇ ಇರಲು ಹೇಗೆ ಸಾಧ್ಯ? ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಜತೆ ಮಾತನಾಡುವ ಅವಕಾಶ ದೊರೆತಿತ್ತು. ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಲಿರುವ ಕ್ರೀಡಾಪಟುಗಳನ್ನು ಹುರಿದುಂಬಿಸುವಂತೆ ನಾನು ಅವರ ಬಳಿ ವಿನಂತಿಸಿದ್ದೆ’ ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.