ಹರಿಯಾಣ: ವಿಧಾನಸಭಾ ಚುನಾವಣೆಯಲ್ಲಿಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯಲ್ಲಿ ಮನೋಹರ್ ಲಾಲ್ ಖಟ್ಟರ್ ಹರಿಯಾಣ ವಿಧಾನಸಭೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಶನಿವಾರ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವಮನೋಹರ್ ಲಾಲ್ ಖಟ್ಟರ್ ಹಾದಿ ಸುಗಮವಾಗಲಿದೆ.
ಜನನಾಯಕ್ ಜನತಾ ಪಕ್ಷ ಮುಖಂಡ ದುಶ್ಯಂತ್ ಚೌಟಾಲ ಅವರ ಜೊತೆ ಸೇರಿ ಕಟ್ಟರ್ ಸರ್ಕಾರ ರಚಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ. ಮೊದಲ ಹಂತವಾಗಿ ರಾಜ್ಯಪಾಲರ ಬಳಿ ತೆರಳಿ ಮನವಿ ಸಲ್ಲಿಸಿ ಸರ್ಕಾರ ರಚಿಸುವ ತಯಾರಿ ನಡೆಸಿದ್ದಾರೆ.
10 ಸ್ಥಾನಗಳನ್ನು ಗೆದ್ದಿರುವ ಜೆಜೆಪಿ ಸಹಾಯದಿಂದ ಬಿಜೆಪಿ ಹರಿಯಾಣದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಶನಿವಾರ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಜರಿದ್ದರು. ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ ಮಾಜಿ ಉಪ ಪ್ರಧಾನಿ ಚೌದರಿ ಲಾಲ್ ಅವರ ಮೊಮ್ಮಗನಾಗಿದ್ದು ಈ ಬಾರಿ ಬಿಜೆಪಿಗೆ ಸಾಥ್ ನೀಡಲಿದ್ದಾರೆ. ಇದರಿಂದಾಗಿ ಎರಡನೇ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಕಾಂಗ್ರೆಸ್ ವಿರೋಧ ಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಸರ್ಕಾರ ರಚಿಸಲು ತಮ್ಮ ಪಕ್ಷವನ್ನು ಆಹ್ವಾನಿಸುವಂತೆ ರಾಜ್ಯಪಾಲ ಸತ್ಯದೇವ್ ನರೇನ್ ಅರ್ಯ ಅವರನ್ನು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಹೈಕಮಾಂಡ್ ಭೇಟಿ ಮಾಡಿದ ಖಟ್ಟರ್ ಹರಿಯಾಣದಲ್ಲಿರುವ ತಮ್ಮ ಪಕ್ಷದ ಸ್ಥಿತಿಗತಿಗಳನ್ನು ವಿವರಿಸಿದ್ದು, ಜೆಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಅನುಮತಿ ಪಡೆದುಕೊಂಡಿದ್ದಾರೆ.
10 ಸ್ಥಾನಗಳನ್ನು ಹೊಂದಿರುವ ಜೆಜೆಪಿಯ ಚೌಟಾಲ ಹಲವು ಷರತ್ತುಗಳನ್ನು ಬಿಜೆಪಿ ಮುಂದಿಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಯಾರು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಜಾರಿಗೆ ತರುತ್ತಾರೋ ಅವರಿಗೆ ತಮ್ಮ ಬೆಂಬಲ ನೀಡುತ್ತೇವೆ. ತಮ್ಮ ಪಕ್ಷದ ಪ್ರಮುಖ ಅಂಶಗಳಾದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ, ಹರಿಯಾಣದವರಿಗೆ ಶೇ.75ರಷ್ಟು ಉದ್ಯೋಗದಲ್ಲಿ ಮೀಸಲಾತಿ, ಹಿರಿಯರಿಗೆ ಮಾಸಾಸನವನ್ನು ಮುಂದುವರಿಸುವುದು ಇವುಗಳನ್ನು ಜಾರಿಗೆ ತರುವಯಾವುದೇ ಪಕ್ಷವಾಗಲಿ ಅವರಿಗೆ ನಮ್ಮ ಬೆಂಬಲ ಎಂದು ಘೋಷಿಸಿದ್ದರು.
ಇವೆಲ್ಲಾ ಷರತ್ತುಗಳಿಗೆ ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ ಒಪ್ಪಿಕೊಂಡಿದ್ದು, ಜೆಜೆಪಿ ಜೊತೆ ಮೈತ್ರಿ ಸರ್ಕಾರ ರಚಿಸಲು ಸಿದ್ಧತೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.