ADVERTISEMENT

ಪರ್ರೀಕರ್ 'ಅಣ್ಣ' ಈಗ ಸಂತಸಗೊಂಡಿರಬಹುದು: ಗೋವಾ ಸಿಎಂ ಪತ್ನಿ

ಐಎಎನ್ಎಸ್
Published 10 ಮಾರ್ಚ್ 2022, 10:31 IST
Last Updated 10 ಮಾರ್ಚ್ 2022, 10:31 IST
ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರ್ರೀಕರ್
ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರ್ರೀಕರ್   

ಪಣಜಿ: ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಬಹುಮತ ತಂದುಕೊಟ್ಟಿರುವುದನ್ನು ನೋಡಿಗೋವಾದ ಮಾಜಿ ಮುಖ್ಯಮಂತ್ರಿದಿ. ಮನೋಹರ್ ಪರ್ರೀಕರ್ ಅವರು ನಗುತ್ತಿರಬಹುದು ಎಂದು ಸಿಎಂ ಪ್ರಮೋದ್ ಸಾವಂತ್ ಅವರ ಪತ್ನಿ ಸುಲಕ್ಷಣಾ ಸಾವಂತ್ ಹೇಳಿದ್ದಾರೆ.

ಗೋವಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಸುಲಕ್ಷಣಾ, '2012ರಲ್ಲಿ ಬಿಜೆಪಿ ಪೂರ್ಣ ಬಹುಮತ ಗಳಿಸಿತ್ತು. ಅದೇ ಚಿತ್ರಣವನ್ನು 2022ರಲ್ಲಿಯೂ ನೋಡುತ್ತಿದ್ದೇವೆ. ಈ ವಿಜಯಕ್ಕಾಗಿ ಕಾರ್ಯಕರ್ತರು ಹೇಗೆ ಒಗ್ಗಟ್ಟಾಗಿ ಶ್ರಮಿಸಿದರು ಎಂಬುದನ್ನು ಕಂಡು ಅಣ್ಣ (ಪರ್ರೀಕರ್) ಸಂತಸಗೊಂಡಿರಬಹುದು ಎಂದು ನನಗನಿಸುತ್ತದೆ' ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.

ಪರ್ರೀಕರ್‌ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಅನಾರೋಗ್ಯದ ಕಾರಣದಿಂದ 2019ರಲ್ಲಿ ನಿಧನರಾಗಿದ್ದರು. ಅದಾದ ಬಳಿಕ ಪ್ರಮೋದ್ ಸಾವಂತ್ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಬಿಜೆಪಿಯು 2012ರಲ್ಲಿ ಮೊದಲ ಬಾರಿಗೆ ಗೋವಾದಲ್ಲಿ ಬಹುಮತ ಪಡೆದುಕೊಂಡಿತ್ತು.

ADVERTISEMENT

ಮಾತು ಮುಂದುವರಿಸಿದ ಸುಲಕ್ಷಣಾ, 'ಈ ಜಯ, ಪಕ್ಷದ ಕಾರ್ಯಕರ್ತರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮಿಂದ ಸಾಧ್ಯವಾದ ಮಟ್ಟಿಗೆ ಮಾಡಿದ ಸಾಮೂಹಿಕ ಪ್ರಯತ್ನದ ಫಲ. ಪ್ರಮೋದ್ ಸಾವಂತ್ ನಾಯಕತ್ವದಲ್ಲಿ ನಾವು ಮ್ಯಾಜಿಕ್ ನಂಬರ್ (ಬಹುಮತಕ್ಕೆ ಬೇಕಿರುವ ಸಂಖ್ಯೆ) 21 ಅನ್ನು ತಲುಪಿದ್ದೇವೆ. ಇದು ಅಭಿವೃದ್ಧಿ ಮತ್ತು ಡಬಲ್‌ ಎಂಜಿನ್‌ ಸರ್ಕಾರಕ್ಕೆ ಸಿಕ್ಕ ಮತವಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಹಾಗೂ ಚುನಾವಣಾ ಉಸ್ತುವಾರಿ ದೇವೇಂದ್ರ ಫಡಣವಿಸ್ ಅವರಿಗೆ ಕೃತಜ್ಞಳಾಗಿದ್ದೇನೆ. ಚುನಾವಣೋತ್ತರ ಸಮೀಕ್ಷೆಗಳು ಏನೇ ಇರಲಿ, ಜನರು ನಮಗೆ ಮತ ನೀಡಿದ್ದಾರೆ' ಎಂದೂ ಹೇಳಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 6 ಕಡೆ ಮುನ್ನಡೆಯಲ್ಲಿದೆ. ಕಾಂಗ್ರೆಸ್ 5,ಎಎಪಿ 1 ಹಾಗೂ ಮೂವರು ಪಕ್ಷೇತ್ರರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

ಉಳಿದಂತೆ ಕಾಂಗ್ರೆಸ್‌ 6, ಗೋವಾ ಫಾರ್ವರ್ಡ್‌ ಪಕ್ಷ 1, ಎಎಪಿಯ 1, ಇತರೆ ಪಕ್ಷಗಳು 2 ಕಡೆ ಮುನ್ನಡೆಯಲ್ಲಿವೆ.

ಅಂದಹಾಗೆ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಮನೋಹರ್ ಪರ್ರಿಕರ್ ಅವರ ಪುತ್ರ ಉತ್ಪಲ್ ಪರ್ರಿಕರ್ ಅವರಿಗೆ ಟಿಕೆಟ್‌ ನೀಡಲು ಬಿಜೆಪಿ ನಿರಾಕರಿಸಿತ್ತು. ಆದರೆ, ಪಣಜಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉತ್ಪಲ್ ಸೋಲು ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.