ಪಣಜಿ:ಖಾಸಗಿ ಭೇಟಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಗೋವಾದ ಮುಖ್ಯಮಂತ್ರಿ ಮನೋಹರ್ ಪರ್‍ರೀಕರ್ ದೂರಿದ್ದಾರೆ.
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಅಸಮಧಾನ ವ್ಯಕ್ತಪಡಿಸಿರುವ ಅವರು ರಾಹುಲ್ ಅವರಿಗೆ ಪತ್ರ ಬರೆದಿದ್ದಾರೆ.
‘ನಮ್ಮ ಭೇಟಿಯನ್ನು ನೀವು ರಾಜಕೀಯಕ್ಕೆ ಬಳಸಿಕೊಂಡಿರಿ. ನನ್ನ ಜತೆ ಕಳೆದ ಐದು ನಿಮಿಷಗಳಲ್ಲಿ ರಫೇಲ್ ಬಗ್ಗೆ ನೀವು ಮಾತನಾಡಲೇ ಇಲ್ಲ. ಅದಕ್ಕೆ ಸಂಬಂಧಿಸಿ ನಾವೇನಾದರೂ ಮಾತನಾಡಿದ್ದೇವೆಯೇ’ ಎಂದು ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದ ಜತೆ ಪರ್‍ರೀಕರ್ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಗೋವಾಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಮುಖ್ಯಮಂತ್ರಿ ಮನೋಹರ್ ಪರ್‍ರೀಕರ್ ಅವರನ್ನು ಭೇಟಿ ಮಾಡಿದ್ದರು. ಇದಾದ ಕೆಲವೇ ಗಂಟೆಗಳ ಬಳಿಕ ಕೇರಳದ ಕೊಚ್ಚಿಯಲ್ಲಿ ಮಾತನಾಡಿ,ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರ್‍ರೀಕರ್ ರಫೇಲ್ ಒಪ್ಪಂದ ಪ್ರಕರಣದಲ್ಲಿನ ತಮ್ಮ ಪಾತ್ರವನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದರು.
ಪರ್‍ರೀಕರ್ ಭೇಟಿ ಬಳಿಕ ರಾಹುಲ್ ಏನು ಹೇಳಿದ್ದರು?
ಬೇಗನೆ ಗುಣಮುಖರಾಗುವಂತೆ ಹಾರೈಸಲು ಇವತ್ತು ಬೆಳಿಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರ್‍ರೀಕರ್ ಅವರನ್ನು ಭೇಟಿಯಾದೆ. ಇದು ಖಾಸಗಿ ಭೇಟಿ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ರಫೇಲ್‌ಗೆ ಸಂಬಂಧಿಸಿ ಪರ್‍ರೀಕರ್ ಜತೆ ರಾಹುಲ್ ಗಾಂಧಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ಕಾಂಗ್ರೆಸ್‌ನ ಗೋವಾ ಘಟಕ ಸಹ ತಿಳಿಸಿತ್ತು. ಆದರೆ, ಇದಾದ ಕೆಲವು ಗಂಟೆಗಳ ಬಳಿಕ, ‘ರಫೇಲ್ ಒಪ್ಪಂದ ಪ್ರಕರಣದಲ್ಲಿನ ತಮ್ಮ ಪಾತ್ರವನ್ನುಪರ್‍ರೀಕರ್ ನಿರಾಕರಿಸಿದ್ದಾರೆ’ ಎಂದು ಹೇಳಿದ್ದರು.
ಇದನ್ನೂ ಓದಿ:ಪರ್‍ರೀಕರ್ ಭೇಟಿಯಾದ ರಾಹುಲ್ ಗಾಂಧಿ
‘ಕೊನೆ ಉಸಿರಿನವರೆಗೂ ಗೋವಾದ ಸೇವೆ ಮಾಡುವೆ’
ಅನಾರೋಗ್ಯದಿಂದ ಬಳಲುತ್ತಿರುವ ನಡುವೆಯೂಪರ್‍ರೀಕರ್ ಅವರು ಗೋವಾದ ಬಜೆಟ್ ಮಂಡಿಸಿದ್ದಾರೆ. ಬಳಿಕ ಟ್ವೀಟ್ ಮಾಡಿರುವ ಅವರು, ‘ಕೊನೆ ಉಸಿರು ಇರುವ ತನಕವೂ ಪ್ರಾಮಾಣಿಕತೆ, ಸಮಗ್ರತೆ ಮತ್ತು ಸಮರ್ಪಣಾ ಭಾವದಿಂದ ಗೋವಾದ ಸೇವೆ ಮಾಡುವೆ ಎಂದು ಇಂದು ಮತ್ತೊಮ್ಮೆ ಭರವಸೆ ನೀಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.