ನವದೆಹಲಿ: ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಮಂದಿ ಪೈಕಿ ಮನೋರಂಜನ್ ಡಿ. ಅವರು ಪಿತೂರಿಯ ಪ್ರಮುಖ ಸಂಚುಕೋರ ಆಗಿದ್ದಾರೆ ಎಂದು ದೆಹಲಿ ಪೊಲೀಸ್ ವಿಶೇಷ ಘಟಕ ಶಂಕಿಸಿದೆ.
ಮನೋರಂಜನ್ ಅವರು, ಏನಾದರೂ ಗಮನ ಸೆಳೆಯುವ ಕಾರ್ಯ ಮಾಡಲು ಇತರ ಸದಸ್ಯರನ್ನು ಹುರಿದುಂಬಿಸಿದ್ದರು ಮತ್ತು ಸಂಸತ್ತಿನ ಭದ್ರತೆ ಉಲ್ಲಂಘಿಸುವ ಯೋಜನೆ ರೂಪಿಸಿದ್ದರು ಎಂದು ಮತ್ತೊಬ್ಬ ಆರೋಪಿ ಲಲಿತ್ ಝಾ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕೃತ್ಯದ ಬಳಿಕ ಸಾಕ್ಷ್ಯಗಳನ್ನು ನಾಶ ಮಾಡುವುದಷ್ಟೇ ತಮ್ಮ ಪಾತ್ರವಾಗಿತ್ತು ಎಂದೂ ಝಾ ಹೇಳಿರುವುದಾಗಿ ತಿಳಿಸಿದ್ದಾರೆ.
ಡಿಸೆಂಬರ್ 13ರಂದು ಸಂಸತ್ತಿನ ಒಳಗೆ ಮನೋರಂಜನ್ ಮತ್ತು ಸಾಗರ್ ಅವರನ್ನು ಬಂಧಿಸಲಾಗಿತ್ತು. ಲೋಕಸಭೆಯ ಸದನದೊಳಗೆ ಸಂದರ್ಶಕರ ಗ್ಯಾಲರಿಯಿಂದ ಜಿಗಿದ ಈ ಇಬ್ಬರು ಶೂಗಳಲ್ಲಿ ಬಚ್ಚಿಟ್ಟಿದ್ದ ಸ್ಮೋಕ್ ಕ್ಯಾನ್ (ಅನಿಲ ಉಗುಳುವ ಡಬ್ಬಿ) ಪ್ರಯೋಗಿಸಿದ್ದರು.
ಮೈಸೂರಿನವರಾದ ಮನೋರಂಜನ್ ನಿರುದ್ಯೋಗಿಯಾಗಿದ್ದು ಈ ಹಿಂದೆ ಕಾಂಬೋಡಿಯಾಗೆ ಭೇಟಿ ನೀಡಿದ್ದರು ಎಂದು ಮೂಲಗಳು ಹೇಳಿವೆ.
ಝಾ ಅವರನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ಅವರನ್ನು 14 ದಿನಗಳವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಒಂದು ವರ್ಷದ ಹಿಂದೆಯೇ ಮನೋರಂಜನ್ ಅವರು ಮೈಸೂರಿಗೆ ಬರುವಂತೆ ಹೇಳಿ ತಮಗೆ ಮತ್ತು ಇತರರಿಗೆ ವಾಟ್ಸ್‌ಆ್ಯಪ್‌ನಲ್ಲಿ ಟಿಕೆಟ್‌ಗಳನ್ನು ಕಳುಹಿಸಿದ್ದರು ಎಂದು ಝಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ನಿರುದ್ಯೋಗ ಮತ್ತು ರೈತರ ಸ್ಥಿತಿ ಮತ್ತು ಮಣಿಪುರ ಬಿಕ್ಕಟ್ಟಿನಿಂದ ವಿಚಲಿತರಾಗಿದ್ದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ. ಸಂಸತ್ತಿನ ಒಳಗೆ ಮತ್ತು ಹೊರಗೆ ಅವರು ನಡೆಸಿದ ಕೃತ್ಯದ ಕಾರಣವನ್ನು ಅವರು ಇನ್ನೂ ಬಹಿರಂಗಪಡಿಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.