ಗುವಾಹಟಿ: ಪಕ್ಕದ ಬಾಂಗ್ಲಾದೇಶದಲ್ಲಿ ಉಂಟಾಗಿರುವ ಕ್ಷೋಭೆಯಿಂದಾಗಿ ಒಳನುಸುಳುವಿಕೆಯ ಸಾಧ್ಯತೆ ಇರುವುದುರಿಂದ ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರದಲ್ಲಿರುವ ಬಾಂಗ್ಲಾದೇಶ– ಭಾರತ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ. ಜನರ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೇಳಿದೆ.
ಅಲ್ಲಿ ನಡೆಯುತ್ತಿರುವ ಹಿಂಸೆಯ ಪರಿಣಾಮವನ್ನು ಎದುರಿಸಲು ಸಜ್ಜಾಗಿರಿ ಎಂದು ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಿಗೆ ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರ ಸರ್ಕಾರಗಳು ಸೂಚಿಸಿವೆ.
‘ಒಳನುಸುಳುವಿಕೆ ಹಾಗೂ ಕಳ್ಳಸಾಗಣಿಕೆ ತಡೆಯಲು ಗಡಿಯುದ್ದಕ್ಕೂ ಭಾರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಯಾವುದೇ ಅನಿರೀಕ್ಷಿತ ಸನ್ನಿವೇಶವನ್ನು ಎದುರಿಸಲು, ಅಂತರರಾಷ್ಟ್ರೀಯ ಗಡಿಯಲ್ಲಿ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ಎಲ್ಲದ್ದಕ್ಕೂ ಸಿದ್ಧವಾಗಿರುವಂತೆ ಸೂಚಿಸಿ, ಹಿರಿಯ ಅಧಿಕಾರಿಗಳು ಹಾಗೂ ಕಮಾಂಡಂಟ್‌ಗಳನ್ನು ನಿಯೋಜಿಸಲಾಗಿದೆ’ ಎಂದು ಬಿಎಸ್‌ಎಫ್ ತಿಳಿಸಿದೆ.
‘ಗಡಿಯಲ್ಲಿ 11 ಬೆಟಾಲಿಯನ್‌ಗಳು, ಜಲ ಫಿರಂಗಿ ಕಣ್ಗಾವಲು ವಹಿಸಿದೆ. ಎಲ್ಲವನ್ನೂ ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಕಸ್ಟಮ್ಸ್ ಠಾಣೆಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ತಕ್ಷಣದ ಮಾಹಿತಿ ಪಡೆಯಲು ಗುಪ್ತಚರ ವಿಭಾಗದ ಕಾರ್ಯಾಚರಣೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಬೆದರಿಕೆಯನ್ನು ಎದುರಿಸಲು ಹಾಗೂ ಅದನ್ನು ಮಟ್ಟಹಾಲು ಸೂಚಿಸಲಾಗಿದೆ’ ಎಂದು ಬಂಗಾಳ ಮತ್ತು ಅಸ್ಸಾಂನ 409 ಕಿ.ಮೀ ಗಡಿಯನ್ನು ಕಾಪಾಡುವ ಬಿಎಸ್‌ಎಫ್‌ನ ಗುವಾಹಟಿ ಫ್ರಾಂಟಿಯರ್ ತಿಳಿಸಿದೆ.
ಪಶ್ಚಿಮ ಬಂಗಾಳ, ಮೇಘಾಲಯ, ತ್ರಿಪುರಾ ಹಾಗೂ ಮಿಜೋರಾಂ ರಾಜ್ಯಗಳು ಬಾಂಗ್ಲಾದೇಶದೊಂದಿಗೆ 4,096 ಕಿ.ಮೀ. ಗಡಿಯನ್ನು ಹಂಚಿಕೊಂಡಿವೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿ ಬಂದ ಬಳಿಕ ಗಡಿಯಾದ್ಯಂತ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ಅಲ್ಲಿ ಸೇನೆಯು ಆಡಳಿತವನ್ನು ವಹಿಸಿಕೊಂಡಿದೆ.
ಬಾಂಗ್ಲಾದೇಶದ ಈ ಅರಾಜಕತೆಯು ದೇಶದ ಈಶಾನ್ಯ ಭಾಗದಲ್ಲಿ ಒಳನುಸುಳುವಿಕೆಯ ಭೀತಿ ಎದುರಾಗಿದೆ. 2021ರಲ್ಲಿ ಮ್ಯಾನ್ಮಾರ್‌ನಲ್ಲಿ ಆಂಗ್ ಸಾನ್ ಸೂಕಿಯವರ ಸರ್ಕಾರವನ್ನು, ಅಲ್ಲಿಯ ಸೇನೆಯು ಉರುಳಿಸಿದ ಬಳಿಕ, ಸಂಸದರು, ಸಚಿವರು ಸೇರಿ ಸುಮಾರು 35 ಸಾವಿರ ನಿರಾಶ್ರಿತರು ಹಾಗೂ ಪ್ರಜಾಪ್ರಭುತ್ವವಾದಿ ಹೋರಾಟಗಾರರು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದರು. ಈಗ ಮಣಿಪುರದಲ್ಲಿ ಮೈತೇಯಿ ಹಾಗೂ ಕುಕಿಗಳ ನಡುವಿನ ಸಂಘರ್ಷಕ್ಕೆ ಮ್ಯಾನ್ಮಾರ್‌ನಿಂದ ಬಂದ ಚಿನ್–ಕುಕಿ ಸಮುದಾಯದ ಒಳನುಸುಳಿವಿಕೆಯೂ ಒಂದು ಕಾರಣ.
1971ರ ಬಳಿಕ ನಡೆಯುತ್ತಿರುವ ಒಳನುಸುಳುವಿಕೆಯಿಂದ ನಮ್ಮ ಸಂಸ್ಕೃತಿ ಮತ್ತು ಗುರುತಿಗೆ ಬೆದರಿಕೆಯೊಡ್ಡಿದೆ. ಹೀಗಾಗಿ ಬಾಂಗ್ಲಾದೇಶದಿಂದ ಆಗುತ್ತಿರುವ ಒಳನುಸುಳುವಿಕೆ ತಡೆಯಬೇಕು ಎಂದು ಈಶಾನ್ಯದಲ್ಲಿ ಸ್ಥಳೀಯ ಸಮುದಾಯಗಳನ್ನು ಪ್ರತಿನಿಧಿಸುವ ಹಲವಾರು ಸಂಘಟನೆಗಳು ಕೇಂದ್ರ ಸರ್ಕಾರವನ್ನು ಸೋಮವಾರ ಒತ್ತಾಯಿಸಿವೆ. ಒಳನುಸುಳುವಿಕೆ ತಡೆಯುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆಯನ್ನೂ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.