ನವದೆಹಲಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರನ್ನು ರಕ್ಷಿಸಲು ಯಂತ್ರ ಬಳಸದೆ ಅಡ್ಡವಾಗಿ ಸುರಂಗ ಕೊರೆಯುವ ಕೆಲಸ ಸೋಮವಾರ ಆರಂಭವಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತಿಳಿಸಿದೆ. ಕಾರ್ಮಿಕರ ರಕ್ಷಣೆಗಾಗಿ ಲಂಬವಾಗಿ ಸುರಂಗ ಕೊರೆಯುವ ಕಾರ್ಯ ಕೂಡ ಮುಂದುವರಿಯಲಿದೆ.
ಯಂತ್ರಗಳ ನೆರವಿಲ್ಲದೆ ಒಂದು ಮೀಟರ್‌ನಷ್ಟು ಸುರಂಗ ಕೊರೆಯಲಾಗಿದೆ, ಅಲ್ಲಿಯವರೆಗೆ ಪೈಪ್ ಸಹ ತೂರಿಸಲಾಗಿದೆ. ಕಾರ್ಮಿಕರನ್ನು ತಲುಪಲು ಇನ್ನು 11 ಮೀಟರ್‌ನಷ್ಟು ಸುರಂಗ ಕೊರೆಯಬೇಕಿದೆ ಎಂದು ಎನ್‌ಡಿಎಂಎ ಹೇಳಿದೆ.
ಕಾರ್ಮಿಕರನ್ನು ತಲುಪಲು ಅಡ್ಡವಾಗಿ ಸುರಂಗ ಕೊರೆಯುತ್ತಿದ್ದ ಯಂತ್ರವು 46.8 ಮೀಟರ್‌ನಷ್ಟು ಒಳಕ್ಕೆ ಸಾಗಿತ್ತು. ಆದರೆ ಅಲ್ಲಿ ಅದಕ್ಕೆ ಹಲವು ಅಡ್ಡಿಗಳು ಎದುರಾಗಿದ್ದವು. ‘ಸುರಂಗ ಕೊರೆಯುವ ಯಂತ್ರದ ಬ್ಲೇಡ್‌ಗಳು ಮುರಿದಿದ್ದವು. ಅವುಗಳನ್ನು ಹೊರತೆಗೆಯಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಭಾರತೀಯ ಸೇನೆಯ ಎಂಜಿನಿಯರ್‌ಗಳು, ಯಂತ್ರಗಳ ನೆರವಿಲ್ಲದೆ ಸುರಂಗ ಕೊರೆಯುವ ಪರಿಣತರು ಹಾಗೂ ಇತರ ತಜ್ಞರ ಸಹಾಯದಿಂದ ಅಡ್ಡವಾಗಿ ಸುರಂಗ ಕೊರೆಯುವ ಕೆಲಸವನ್ನು ಆರಂಭಿಸಲಾಗಿದೆ’ ಎಂದು ಎನ್‌ಡಿಎಂಎ ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತ್ತಾ ಹಸ್ನೈನ್ ತಿಳಿಸಿದ್ದಾರೆ. ಆರು ಜನರು, ಮೂರು ಜನರ ಎರಡು ತಂಡಗಳಾಗಿ ಕೆಲಸ ಮಾಡಲಿದ್ದಾರೆ.
ಈಗ ಕಾರ್ಮಿಕರನ್ನು ರಕ್ಷಿಸಲು ಲಂಬವಾಗಿ ಹಾಗೂ ಅಡ್ಡವಾಗಿ ಸುರಂಗ ಕೊರೆಯುವ ಕೆಲಸ ನಡೆದಿದೆ. ಇದರ ಜೊತೆಯಲ್ಲೇ, ಬಾರ್ಕೋಟ್ ಕಡೆಯಿಂದ ಅಡ್ಡವಾಗಿ ಇನ್ನೊಂದು ಸುರಂಗ ಕೊರೆಯುವ ಕೆಲಸ ಕೂಡ ಪ್ರಗತಿಯಲ್ಲಿದೆ.
ಕಾರ್ಮಿಕರನ್ನು ಹೊರಗೆ ಕರೆತರಲು ಲಂಬವಾಗಿ 86 ಮೀಟರ್ ಕೊರೆಯಬೇಕಿದೆ. ಅಲ್ಲಿಂದ ಕಾರ್ಮಿಕರನ್ನು ರಕ್ಷಿಸಲು, 1.2 ಮೀಟರ್ ವ್ಯಾಸದ ಪೈಪ್ ಅಳವಡಿಸಬೇಕಿದೆ. ಈ ಕೆಲಸವು ಭಾನುವಾರದಿಂದ ಆರಂಭವಾಗಿದೆ.
‘ಲಂಬವಾಗಿ ಅಂದಾಜು 32 ಮೀಟರ್ ಸುರಂಗ ಕೊರೆಯುವ ಕೆಲಸವನ್ನು ಎಸ್‌ವಿಎನ್‌ಎಲ್ ಪೂರ್ಣಗೊಳಿಸಿದೆ. ಆರ್‌ವಿಎನ್‌ಎಲ್‌ನ ತಜ್ಞರು ಇನ್ನೊಂದೆಡೆ 75 ಮೀಟರ್‌ವರೆಗೆ ಪೈಪ್ ಅಳವಡಿಸಿದ್ದಾರೆ. ಈ ಪೈಪ್ ಮೂಲಕವೂ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ರವಾನಿಸಬಹುದು’ ಎಂದು ಹಸ್ನೈಯ್ ತಿಳಿಸಿದ್ದಾರೆ.
ಯಂತ್ರಗಳ ಸಹಾಯವಿಲ್ಲದೆ ಸುರಂಗ ಕೊರೆಯುವ ಕೆಲಸವು ಶುರುವಾದ ನಂತರದಲ್ಲಿ, ಕಾರ್ಮಿಕರನ್ನು ರಕ್ಷಿಸಲು ಎಷ್ಟು ಸಮಯ ಬೇಕಾಗಬಹುದು ಎನ್ನುವುದನ್ನು ಹೇಳಲು ಸಾಧ್ಯ ಎಂದು ಅವರು ತಿಳಿಸಿದರು. ಆದರೆ ಈ ಕೆಲಸದಲ್ಲಿ ಕೂಡ ಅಡ್ಡಿಗಳು ಎದುರಾಗಬಹುದು ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಗೃಹ ಕಾರ್ಯದರ್ಶಿ ಅಜಯ್ ಕೆ. ಭಲ್ಲಾ ಮತ್ತು ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಎಸ್.ಎಸ್. ಸಂಧು ಅವರು ರಕ್ಷಣಾ ಕಾರ್ಯಗಳನ್ನು ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.