ಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ ಇಳಿದು ಉಸಿರುಗಟ್ಟಿ ಗಂಭೀರ ಸ್ಥಿತಿಯಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಸರ್ಜಾಪುರದ ನಿವಾಸಿ ಮುನಿಯಪ್ಪ (50) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶ್ರೀ ಶ್ವೇತಾಂಬರ್ ಸ್ಥಾನಕ್ ವಾಸಿ ಬಾವೀಸ್ ಸಂಪ್ರದಾಯ್ ಜೈನ್ ಸಂಘದ (ಟ್ರಸ್ಟ್) ಆವರಣದಲ್ಲಿ ಇದೇ 25ರಂದು ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿತ್ತು.
ಈ ದುರ್ಘಟನೆಯಲ್ಲಿ ಬಳ್ಳಾರಿ ಜಿಲ್ಲೆ ಸಿರುಗಪ್ಪ ತಾಲ್ಲೂಕಿನ ಘೋಷ್ವಾಲ ಗ್ರಾಮದ ನಾರಾಯಣ ಅವರ ಪುತ್ರ ಸಿದ್ದಪ್ಪ (18) ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದರು. ಸಿದ್ದಪ್ಪ ಅವರನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ಮುನಿಯಪ್ಪ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಮೂರು ದಿನಗಳಿಂದ ಮುನಿಯಪ್ಪ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದರು.
ಇದನ್ನೂ ಓದಿ:ಶೌಚಗುಂಡಿಯಲ್ಲಿ ಉಸಿರುಗಟ್ಟಿ ಕಾರ್ಮಿಕ ಸಾವು
ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಮುನಿಯಪ್ಪ ಕೊನೆಯುಸಿರೆಳೆದಿದ್ದಾರೆ. ಕಮರ್ಷಿಯಲ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನಾಗರಾಜು ಅವರು ಸಾವಿನ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಮುನಿಯಪ್ಪ ಅವರು ಬೋವಿ (ಎಸ್.ಸಿ) ಸಮುದಾಯಕ್ಕೆ ಸೇರಿದವರು. ಈ ಘಟನೆ ಕುರಿತು ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿ ದೂರು ನೀಡಿದ್ದು, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ರಸ್ಟ್‌ನ ವ್ಯವಸ್ಥಾಪಕ, ಟ್ರಸ್ಟಿಗಳು ಮತ್ತು ಟ್ರಸ್ಟಿಯ ಇದರ ಪದಾದಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ (ತಡೆ) ಕಾಯ್ದೆ ಮತ್ತು ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಘಟನೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ ಸೋಮವಾರ ಪ್ರತಿಭಟನೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.