ADVERTISEMENT

ನವಿ ಮುಂಬೈ | ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಮೂವರು ಸಾವು, ಇಬ್ಬರ ರಕ್ಷಣೆ

ಪಿಟಿಐ
Published 27 ಜುಲೈ 2024, 11:08 IST
Last Updated 27 ಜುಲೈ 2024, 11:08 IST
<div class="paragraphs"><p>ನವಿ ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, ರಕ್ಷಣಾ ಕಾರ್ಯಾಚರಣೆ</p></div>

ನವಿ ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, ರಕ್ಷಣಾ ಕಾರ್ಯಾಚರಣೆ

   

(ಪಿಟಿಐ ಚಿತ್ರ)

ಮುಂಬೈ: ನವಿ ಮುಂಬೈಯ ಸಿಬಿಡಿ ಬೇಲಾಪುರ ಪ್ರದೇಶದಲ್ಲಿ ಇಂದು (ಶನಿವಾರ) ಮುಂಜಾನೆ ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದು, ಅವಶೇಷಗಳಡಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮೃತರನ್ನು ಮೊಹಮ್ಮದ್ ಮಿರಾಜ್ ಅಲ್ತಾಫ್ ಹುಸೇನ್ (30), ಮೀರಜ್ ಸೈಫ್ ಅನ್ಸಾರಿ (24) ಮತ್ತು ಶಫೀಕ್ ಅಹ್ಮದ್ ರಹಮತ್ ಅಲಿ ಅನ್ಸಾರಿ (28) ಎಂದು ಗುರುತಿಸಲಾಗಿದೆ.

ಬಳಿಕ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಅವಶೇಷಗಳಡಿಯಿಂದ ಲಾಲ್ ಮೊಹಮ್ಮದ್ (22) ಮತ್ತು ರುಖ್ಸಾನಾ (21) ಎಂಬವರನ್ನು ರಕ್ಷಿಸಲಾಗಿದೆ. ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನವಿ ಮುಂಬೈ ಮಹಾನಗರ ಪಾಲಿಕೆ (ಎನ್‌ಎಂಎಂಸಿ) ಕಮಿಷನರ್ ಕೈಲಾಸ್ ಶಿಂದೆ ತಿಳಿಸಿದ್ದಾರೆ.

ಇಂದು ಮುಂಜಾನೆ 13 ವಸತಿ ಘಟಕಗಳು ಹಾಗೂ ಮೂರು ಅಂಗಡಿಗಳನ್ನು ಹೊಂದಿರುವ ನಾಲ್ಕು ಅಂತಸ್ತಿನ ಕಟ್ಟಡವು ಕುಸಿದಿತ್ತು. ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡ ಬೆನ್ನಲ್ಲೇ ಇತರೆ 52 ನಿವಾಸಿಗಳನ್ನು ಸ್ಥಳಾಂತರ ಮಾಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಅಗ್ನಿಶಾಮಕ ದಳ, ಹಾಗೂ ಸ್ಥಳೀಯರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು. ಶ್ವಾನದಳದ ನೆರವನ್ನು ಪಡೆಯಲಾಯಿತು. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಈಗಲೂ ಮುಂದುವರಿದಿದೆ.

ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ, ದೂರವಾಣಿ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ನವಿ ಮುಂಬೈ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ.

ನವಿ ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, ರಕ್ಷಣಾ ಕಾರ್ಯಾಚರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.