ತಿರುವನಂತಪುರ: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತ ದುರಂತದಲ್ಲಿ 308 ಮಂದಿ ಮೃತಪಟ್ಟಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಖಚಿತಪಡಿಸಿದ್ದಾರೆ.
ಈವರೆಗೆ 195 ಮೃತದೇಹಗಳು ಹಾಗೂ 113 ದೇಹದ ಭಾಗಗಳು ಪತ್ತೆಯಾಗಿವೆ ಎಂದು ಸಚಿವ ಜಾರ್ಜ್ ತಿಳಿಸಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಮಾತನಾಡಿ, ಸುಮಾರು 300 ಮಂದಿ ಇನ್ನೂ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಇದೆ. ಇನ್ನು ಎರಡು ಮೂರು ದಿನಗಳಲ್ಲಿ ಕಂದಾಯ ಇಲಾಖೆ ಈ ಕುರಿತ ಖಚಿತ ಸಂಖ್ಯೆಯನ್ನು ತಿಳಿಸಲಿದೆ ಎಂದು ಹೇಳಿದ್ದಾರೆ.
190 ಅಡಿ ಉದ್ದದ ಬೈಲಿ ಸೇತುವೆಯನ್ನು (ತಾತ್ಕಾಲಿಕ ಉಕ್ಕಿನ ಸೇತುವೆ) ನಿರ್ಮಿಸಿದ್ದು, ಇಂದು (ಶುಕ್ರವಾರ) ಮುಂಜಾನೆಯಿಂದ ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ವೇಗ ಪಡೆದುಕೊಂಡಿದೆ. ಇದರಿಂದಾಗಿ ಭೂಕುಸಿತದಿಂದ ಹೆಚ್ಚು ಬಾಧಿತ ಪ್ರದೇಶಗಳಾದ ಚೂರಲ್‌ಮಲ ಮತ್ತು ಮುಂಡಕ್ಕೈ ಪ್ರದೇಶಗಳಿಗೆ ಅಗೆಯುವ ಯಂತ್ರಗಳು ಮತ್ತು ಆಂಬುಲೆನ್ಸ್ ಸೇರಿದಂತೆ ಭಾರಿ ಯಂತ್ರಗಳ ಚಲನೆಗೆ ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಭೂಕುಸಿತ ಪೀಡಿತ ಪ್ರದೇಶಗಳಾದ ಅಟ್ಟಮಲ ಮತ್ತು ಆರನ್ಮಲ, ಮುಂಡಕ್ಕೈ, ಪುಂಚಿರಿಮಟ್ಟಂ, ವೆಳ್ಳರಿಮಲ ಗ್ರಾಮ, ಜಿವಿಎಚ್‌ಎಸ್‌ಎಸ್ ವೆಳ್ಳರಿಮಲ ಮತ್ತು ನದಿ ತೀರಗಳು ಸೇರಿದಂತೆ ಒಟ್ಟು ಆರು ವಲಯಗಳಲ್ಲಿ 40 ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.