ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಶುಕ್ರವಾರ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ಮಂಜು ಕವಿದ ವಾತಾವರಣದಿಂದಾಗಿ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಕೆಲವು ವಿಮಾನಗಳ ಹಾರಾಟ ವಿಳಂಬವಾದರೆ, ಇನ್ನು ಒಂದು ವಿಮಾನ ಸಂಚಾರವನ್ನು ರದ್ದುಗೊಳಿಸಿದೆ.
ದೆಹಲಿಯಿಂದ ಮೆಲ್ಬರ್ನ್‌ಗೆ ಹೋಗಬೇಕಿದ್ದ ಏರ್ ಇಂಡಿಯಾ ವಿಮಾನವು ಸುಮಾರು 2:25 ಗಂಟೆಗಳ ಕಾಲ ವಿಳಂಬವಾಯಿತು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಮೂರು ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಎರಡು ವರ್ಷಗಳಲ್ಲಿ ಜನವರಿಯಲ್ಲಿ ಇದು ಅತ್ಯಂತ ಕನಿಷ್ಠ ತಾಪಮಾನವಾಗಿದೆ.
ರೈಲ್ವೆ ಸಂಚಾರ ವ್ಯತ್ಯಯ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶೀತಗಾಳಿ ಮತ್ತು ದಟ್ಟವಾದ ಮಂಜು ಹೆಚ್ಚಾಗಿರುವ ಕಾರಣ ರೈಲ್ವೇ ಸಂಚಾರದಲ್ಲಿ ವ್ಯತ್ಯಯವಾಗಿದೆ.
ದೆಹಲಿಯ ಡಾಲ್‌ಹೌಸಿಯಲ್ಲಿ 4.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ, ಧರ್ಮಶಾಲಾ 5.2 ಡಿಗ್ರಿ ಸೆಲ್ಸಿಯಸ್, ಕಂಗ್ರಾ 3.2, ಶಿಮ್ಲಾ 3.7, ಡೆಹ್ರಾಡೂನ್ 4.6, ಮಸ್ಸೂರಿ 4.4 ಮತ್ತು ನೈನ್‌ಟಾಲ್‌ನಲ್ಲಿ 6.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದಾಗಿ ಎಲ್ಲೆಡೆ ಮಂಜು ಕವಿದಿದ್ದು, ಕನಿಷ್ಠ 12 ರೈಲುಗಳ ಸಂಚಾರದಲ್ಲಿ 1 ರಿಂದ 6ಗಂಟೆಗಳು ವ್ಯತ್ಯಯವಾಗಿದೆ ಎಂದು ಅಧಿಕೃತ ಮೂಲ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 40 ದಿನಗಳ ಕಠಿಣ ಚಳಿಗಾಲದ 'ಚಿಲೈ ಕಲನ್' ನಡೆಯುತ್ತಿರುವುದರಿಂದ ದಾಖಲೆಯ ತಾಪಮಾನ ಕುಸಿತವಾಗಿದ್ದು, ಶ್ರೀನಗರದಲ್ಲಿ ಬುಧವಾರ ರಾತ್ರಿ ಮೈನಸ್ 6.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತದಾದ್ಯಂತ ದಟ್ಟವಾದ ಮಂಜು ಆವರಿಸಿದ್ದು, ಮುಂದಿನ ವಾರದಲ್ಲೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.