ADVERTISEMENT

ತೆಲಂಗಾಣ | ಗುಂಡಿನ ಚಕಮಕಿ; 6 ಮಾವೋವಾದಿಗಳ ಹತ್ಯೆ, 2 ಭದ್ರತಾ ಸಿಬ್ಬಂದಿಗೆ ಗಾಯ

ಪಿಟಿಐ
Published 5 ಸೆಪ್ಟೆಂಬರ್ 2024, 9:02 IST
Last Updated 5 ಸೆಪ್ಟೆಂಬರ್ 2024, 9:02 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯಲ್ಲಿ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಆರು ಮಂದಿ ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಮಾವೋವಾದಿಗಳು ಹತ್ಯೆಯಾಗಿದ್ದಾರೆ.

ADVERTISEMENT

ಗುಂಡಿನ ಚಕಮಕಿಯಲ್ಲಿ ತೆಲಂಗಾಣ ಪೊಲೀಸ್‌ನ ನಕ್ಸಲ್ ನಿಗ್ರಹ ಪಡೆಯ ಇಬ್ಬರು ಕಾಮಾಂಡೋಗಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಾರಕಗುಡಂ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗುಂಡಿನ ಕಾಳಗ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮೋತೆ ಗ್ರಾಮದಲ್ಲಿ ‍ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ, ಬೆಳಿಗ್ಗೆ ಸುಮಾರು 6.45ರ ಹೊತ್ತಿಗೆ ಗುಂಡಿನ ದಾಳಿ ಆರಂಭವಾಗಿದೆ. ಮಾವೋವಾದಿಗಳು ಏಕಾಏಕಿ ಪೊಲೀಸರ ಮೇಲೆ ದಾಳಿ ಆರಂಭಿಸಿದರು. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ’ ಎಂದು ಪೊಲೀಸರು ಗುರುವಾರ ತಿಳಿಸಿದರು.

‘ಛತ್ತೀಸಗಢದಿಂದ ತೆಲಂಗಾಣವನ್ನು ಮಾವೋವಾದಿಗಳು ಪ್ರವೇಶಿಸುತ್ತಾರೆ ಎನ್ನುವ ಕುರಿತು ನಮಗೆ ಮಾಹಿತಿ ದೊರೆತಿತ್ತು. ಹೀಗಾಗಿ, ಗಸ್ತು ನಡೆಸಲಾಗುತ್ತಿತ್ತು. ದಾಳಿ ನಡೆಸದಂತೆ ಮಾವೋವಾದಿಗಳು ಎಚ್ಚರಿಕೆ ನೀಡಿದೆವು. ಆದರೆ, ಅವರು ನಿಲ್ಲಿಸಲಿಲ್ಲ. ಆದ್ದರಿಂದ ಸ್ವಯಂ ರಕ್ಷಣೆಗಾಗಿ ನಾವೂ ಪ್ರತಿ ದಾಳಿ ನಡೆಸಬೇಕಾಯಿತು’ ಎಂದು ಮಾಹಿತಿ ನೀಡಿದರು.

‘ಮೃತರು ಭದ್ರಾದ್ರಿ ಕೊತ್ತಗೂಡೆಂ–ಅಲ್ಲೂರಿ ಸೀತಾರಾಮರಾಜು ವಿಭಾಗೀಯ ಸಮಿತಿಯವರು. ಮೃತರ ಗುರುತು ಇನ್ನುವರೆಗೂ ಪತ್ತೆಯಾಗಿಲ್ಲ. ಆದರೆ, ಅವರಲ್ಲಿ ಒಬ್ಬರು ಸಂಘಟನೆಯ ನಾಯಕರಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ವಿವರಿಸಿದರು.

ಘಟನಾ ಸ್ಥಳದಿಂದ ಎರಡು ಎಕೆ47, ಎಸ್‌ಆರ್‌ಆರ್ ಸೇರಿದಂತೆ ಆರು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.