ADVERTISEMENT

‘ಕೈ’ ಹಿಡಿದು ಮುನ್ನಡೆಸಿದ ಬಘೆಲ್‌

ಪಿಟಿಐ
Published 16 ಡಿಸೆಂಬರ್ 2018, 20:15 IST
Last Updated 16 ಡಿಸೆಂಬರ್ 2018, 20:15 IST
ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ , ಛತ್ತೀಸಗಡ ನಿಯೋಜಿತ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಪಿ.ಎಲ್‌. ಪುನಿಯಾ ಮತ್ತು ಇತರರು ಸಿಎಲ್‌ಪಿ ಸಭೆಯ ಬಳಿಕ ಪ್ರತಿಕಾಗೋಷ್ಠಿ ನಡೆಸಿದರು.
ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ , ಛತ್ತೀಸಗಡ ನಿಯೋಜಿತ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಪಿ.ಎಲ್‌. ಪುನಿಯಾ ಮತ್ತು ಇತರರು ಸಿಎಲ್‌ಪಿ ಸಭೆಯ ಬಳಿಕ ಪ್ರತಿಕಾಗೋಷ್ಠಿ ನಡೆಸಿದರು.    

ರಾಯಪುರ:ಛತ್ತೀಸಗಡದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಪ್ರಮುಖ ನಾಯಕರು ನಕ್ಸಲ್‌ ದಾಳಿಗೆ ಐದು ವರ್ಷಗಳ ಹಿಂದೆ ಬಲಿಯಾದರು. ಪಕ್ಷ ಅನಾಥವಾಯಿತು. ಅಲ್ಲಿಂದ ಪಕ್ಷವನ್ನು ಕಟ್ಟಿ ಇಂದು ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನತ್ತ ಕೊಂಡೊಯ್ದದ್ದರಲ್ಲಿ ಭೂಪೇಶ್‌ ಬಘೆಲ್‌ ಅವರ ಪಾತ್ರ ಬಹಳ ದೊಡ್ಡದು.

ಪ್ರಭಾವಿ ಕುರ್ಮಿ (ಹಿಂದುಳಿದ ವರ್ಗ) ಸಮುದಾಯದ 57 ವರ್ಷದ ಬಘೆಲ್ ರಾಜಕೀಯ ತೀಕ್ಷ್ಣಮತಿ ಮತ್ತು ಗಟ್ಟಿ ನಾಯಕತ್ವ ಗುಣ ಉಳ್ಳವರು. ಅವರ ಕುರ್ಮಿ ಸಮುದಾಯದ ಜನರು ರಾಜ್ಯದಲ್ಲಿ ಶೇ 14ರಷ್ಟಿದ್ದಾರೆ.

2013ರ ಮೇಯಲ್ಲಿ ಸುಕ್ಮಾ ಜಿಲ್ಲೆಯಲ್ಲಿ ನಡೆದ ನಕ್ಸಲ್‌ ದಾಳಿಗೆ ಕಾಂಗ್ರೆಸ್‌ ಮುಖಂಡರು ಬಲಿಯಾಗಿ ಒಂದೂವರೆ ವರ್ಷದ ಬಳಿಕ 2014ರ ಅಕ್ಟೋಬರ್‌ನಲ್ಲಿ ಬಘೆಲ್‌ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷತೆ ವಹಿಸಿಕೊಂಡರು. ದಾಳಿಯಲ್ಲಿ ಹಿರಿಯ ಮುಖಂಡ ವಿ.ಸಿ. ಶುಕ್ಲಾ ಮತ್ತು ಆಗ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ನಂದ ಕುಮಾರ್‌ ಪಟೇಲ್‌ ಮೃತಪಟ್ಟಿದ್ದರು.

ADVERTISEMENT

2013ರಲ್ಲಿ ಪಕ್ಷ ಅಲ್ಲಿ ಸತತ ಮೂರನೇ ಬಾರಿಗೆ ಸೋತಿತ್ತು. ಮುಖ್ಯಮಂತ್ರಿಯಾಗಿ ಪ್ರಬಲ ನಾಯಕ ರಮಣ್‌ ಸಿಂಗ್‌ ಅವರಿದ್ದರು. ಕಾಂಗ್ರೆಸ್‌ನೊಳಗೆ ಆಂತರಿಕ ಕಲಹ ಮುಗಿಲು ಮುಟ್ಟಿತ್ತು. ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಮತ್ತು ಇತರ ಮುಖಂಡರ ನಡುವೆ ಸರಿಪಡಿಸಲಾರದಷ್ಟು ಭಿನ್ನಾಭಿಪ್ರಾಯವಿತ್ತು. 2014ರಲ್ಲಿ ಅಂತಗಡ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಒಳಒಪ‍್ಪಂದ ನಡೆದಿತ್ತು ಎಂದು 2015ರಲ್ಲಿ ಬಹಿರಂಗವಾದ ಧ್ವನಿ ಸುರುಳಿಯಲ್ಲಿ ಹೇಳಲಾಗಿತ್ತು. ಪರಿಣಾಮವಾಗಿ, ಅಜಿತ್‌ ಜೋಗಿ ಅವರ ಮಗ ಅಮಿತ್‌ ಜೋಗಿಯನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಯಿತು. ಬಳಿಕ ಅಜಿತ್‌ ಜೋಗಿ ಅವರೂ ಪಕ್ಷ ತೊರೆದರು. ಅಂತಹ ಸಂದರ್ಭದಲ್ಲಿ ಮುನ್ನೆಲೆಯಲ್ಲಿ ನಿಂತು ಬಘೆಲ್‌ ಪಕ್ಷ ಕಟ್ಟಿದ್ದಾರೆ.

ಸತತ ಮೂರು ಸೋಲಿನಿಂದಾಗಿ ಪಕ್ಷ ತೀರಾ ಸಂಕಷ್ಟಮಯ ಸನ್ನಿವೇಶದಲ್ಲಿತ್ತು. ಕಾರ್ಯಕರ್ತರು ನಿರಾಶರಾಗಿದ್ದರು. ಬಘೆಲ್‌ ಮತ್ತು ಆಗ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಟಿ.ಎಸ್‌. ಸಿಂಹದೇವ್‌ ಜತೆಯಾಗಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

1993ರಲ್ಲಿ ಪಾಠನ್‌ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಬಘೆಲ್‌ 1998 ಮತ್ತು 2003ರಲ್ಲಿಯೂ ಈ ಕ್ಷೇತ್ರದಿಂದ ಗೆದ್ದರು. 2008ರಲ್ಲಿ ಬಿಜೆಪಿಯ ವಿಜಯ ಬಘೆಲ್‌ ಎದುರು ಸೋತರು. 2009ರಲ್ಲಿ ರಾಯಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಅಲ್ಲಿಯೂ ಸೋತರು. 2013ರಲ್ಲಿ ಮತ್ತು ಈ ಬಾರಿ ಪಾಠನ್‌ನಲ್ಲಿ ಅವರು ಗೆದ್ದಿದ್ದಾರೆ. 2000–2003ರವರೆಗೆ ಛತ್ತೀಸಗಡದ ಕಂದಾಯ ಸಚಿವರಾಗಿ ಕೆಲಸ ಮಾಡಿದ್ದಾರೆ.

ರಮಣ್‌ ಸಿಂಗ್‌ ಸರ್ಕಾರದ ಬಗ್ಗೆಕಾಂಗ್ರೆಸ್‌ನ ಹಿರಿಯ ಮುಖಂಡರು ಮೃದು ಧೋರಣೆ ತಾಳಿದ್ದೇ ಹೆಚ್ಚು. ಆದರೆ, ಬಘೆಲ್‌ ಅಧ್ಯಕ್ಷರಾದ ಬಳಿಕ ರಮಣ್‌ ಸಿಂಗ್‌, ಅವರ ಕುಟುಂಬದ ಸದಸ್ಯರು ಮತ್ತು ಸಂಪುಟದ ಸಚಿವರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ಆರೋಪಗಳು ಜನರ ಚರ್ಚೆಯ ವಿಷಯವಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಘೆಲ್‌ ವಿರುದ್ಧ ಹಲವು ಆರೋಪಗಳು ಬಂದಿದ್ದವು. ಅಂತಹ ಸಂದರ್ಭದಲ್ಲಿಯೂ ರಮಣ್‌ ಸಿಂಗ್‌ ವಿರುದ್ಧದ ತಮ್ಮ ವಾಗ್ದಾಳಿಯನ್ನು ಅವರು ನಿಲ್ಲಿಸಿರಲೇ ಇಲ್ಲ. ಲೈಂಗಿಕ ಹಗರಣವೊಂದರಲ್ಲಿ ಬಘೆಲ್‌ ಹೆಸರು ಕೇಳಿ ಬಂದಿತ್ತು. ಭೂಮಿ ಮಂಜೂರಾತಿಯಲ್ಲಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಬಘೆಲ್‌ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಆರ್ಥಿಕ ಅಪರಾಧಗಳ ಘಟಕವು ಕಳೆದ ವರ್ಷ ಪ್ರಕರಣ ದಾಖಲಿಸಿಕೊಂಡಿತ್ತು.

ಲೈಂಗಿಕ ಹಗರಣದಲ್ಲಿ ಬಘೆಲ್‌, ಅವರ ನಿಕಟವರ್ತಿ ಪತ್ರಕರ್ತ ವಿನೋದ್‌ ವರ್ಮಾ ಮತ್ತು ಇತರ ಮೂವರ ವಿರುದ್ಧ ಸಿಬಿಐ ಸೆಪ್ಟೆಂಬರ್‌ನಲ್ಲಿ ಆರೋಪಪಟ್ಟಿ ದಾಖಲಿಸಿದೆ.

ಬಂಧನಕ್ಕೊಳಗಾದ ಬಘೆಲ್‌ ಜಾಮೀನು ಪಡೆಯಲು ನಿರಾಕರಿಸಿ ಕೆಲ ದಿನ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದರು. ಸರ್ಕಾರದ ವಿರುದ್ಧ ಜೈಲಿನಲ್ಲಿಯೇ ಸತ್ಯಾಗ್ರಹ ನಡೆಸುವುದಾಗಿಯೂ ಹೇಳಿದ್ದರು.

ಬಘೆಲ್‌ ವಿರುದ್ಧದ ಪ್ರಕರಣಗಳು ರಾಜಕೀಯಪ್ರೇರಿತ ಎಂದು ಕಾಂಗ್ರೆಸ್‌ ಮುಖಂಡರು ಪ್ರತಿಪಾದಿಸಿದ್ದರು. ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಲೈಂಗಿಕ ಹಗರಣವನ್ನು ಇಟ್ಟುಕೊಂಡು ಬಿಜೆಪಿ ಮುಖಂಡರು ಬಘೆಲ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.