ಮಲಪ್ಪುರಂ(ಕೇರಳ): ಇಲ್ಲಿನ ತಾನೂರು ಪ್ರದೇಶದ ತುವಲ್ತಿರಾಮ್ ಬೀಚ್‌ನಲ್ಲಿ ಭಾನುವಾರ ಪ್ರವಾಸಿ ಹೌಸ್‌ಬೋಟ್ ಮುಗುಚಿ 16 ಮಂದಿ ಮೃತಪಟ್ಟಿದ್ದಾರೆ.
ಒಟ್ಟು 30 ಜನರು ಹೌಸ್‌ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮೃತಪಟ್ಟವರಲ್ಲಿ ಬಹುತೇಕ ಮಕ್ಕಳು ಮತ್ತು ಮಹಿಳೆಯರು ಇದ್ದಾರೆ. ಶಾಲೆಗಳಿಗೆ ರಜೆ ಇದ್ದ ಕಾರಣ ಮಕ್ಕಳೊಟ್ಟಿಗೆ ಪೋಷಕರು ಬೀಚ್‌ನಲ್ಲಿ ವಿಹರಿಸಲು ಬಂದಿದ್ದರು.
ದೋಣಿ ಕೆಳಗೆ ಸಿಲುಕಿದ್ದ ಕೆಲವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
‘12 ಮೃತದೇಹಗಳನ್ನು ಗುರುತಿಸಲಾಗಿದೆ. ಕೆಸರಿನಲ್ಲಿ ಸಿಲುಕಿಕೊಂಡಿದ್ದ ದೋಣಿಯನ್ನು ಮೇಲೆತ್ತಲಾಗುತ್ತಿದೆ. ಹಾಗಾಗಿ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ’ ಎಂದು ಕ್ರೀಡಾ ಸಚಿವ ವಿ. ಅಬ್ದು ರಹಮಾನ್ ಸುದ್ದಿಗಾರರಿಗೆ ತಿಳಿಸಿದರು.
‘ದೋಣಿಯಲ್ಲಿ ನಿಗದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿದ್ದರು. ಇದೇ ಅವಘಡಕ್ಕೆ ಕಾರಣವಾಗಿದೆ. ಸಂಜೆ 6 ಗಂಟೆ ನಂತರ ದೋಣಿ ವಿಹಾರಕ್ಕೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿ ಸಂಜೆ 7 ಗಂಟೆಗೆ ತೆರಳಿದ್ದಾರೆ ’ ಎಂದು ಶಾಸಕ ಕನ್ಹಾಲಿ ಕುಟ್ಟಿ ತಿಳಿಸಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಅಗತ್ಯ ನೆರವು ನೀಡುವಂತೆ ಮಲಪ್ಪುರಂ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
‘ದೋಣಿ ದುರಂತದಲ್ಲಿ ಪ್ರವಾಸಿಗರು ಮೃತಪಟ್ಟಿರುವುದು ನನಗೆ ನೋವು ತಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.