ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದ 33 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ, ಶಿಮ್ಲಾದಲ್ಲಿ ಭೂಕುಸಿತ ಸಂಭವಿಸಿ, ದೇವಾಲಯದ ಅವಶೇಷಗಳಡಿ ಸಿಲುಕಿ ಏಳು ಜನರು ಸಮಾಧಿಯಾಗಿದ್ದಾರೆ. ಅವಶೇಷಗಳಡಿ ಇನ್ನಷ್ಟು ಜನರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ಸೋಮವಾರ ಭರದಿಂದ ಸಾಗಿತ್ತು.
ರಾಜ್ಯದಲ್ಲಿ ಭಾನುವಾರದಿಂದ ಸುರಿದ ಮಹಾಮಳೆಯು ಭಾರಿ ಹಾನಿ ಉಂಟುಮಾಡಿದೆ. ಅಲ್ಲಲ್ಲಿ ಭೂಕುಸಿತ ಉಂಟಾಗಿ, ಪ್ರಮುಖ ರಸ್ತೆಗಳು ಹಾನಿಗೊಂಡಿದ್ದು, ಸಂಚಾರ ಬಂದ್ ಆಗಿದೆ. ಹಲವು ಮನೆಗಳು ನೆಲಸಮಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಮ್ಲಾದ ಸಮ್ಮರ್ ಹಿಲ್ ಪ್ರದೇಶದ ಶಿವ ದೇವಾಲಯ ನೆಲಸಮಗೊಂಡಿದ್ದು, ಅವಶೇಷಗಳಡಿ ಇನ್ನಷ್ಟು ಜನರು ಸಿಲುಕಿರುವ ಶಂಕೆ ಇದೆ. ಶ್ರಾವಣದ ವಿಶೇಷ ಪೂಜೆ ಸಲ್ಲಿಸಲು ಭಕ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾಗಲೇ ಈ ದುರಂತ ಸಂಭವಿಸಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಅವಶೇಷಗಳಡಿ ಹೂತು ಹೋಗಿರುವ ಜನರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಳೆಯಿಂದ ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಭೂಕುಸಿತ ಫಗ್ಲಿ ಪ್ರದೇಶದಲ್ಲಿ ಸಂಭವಿಸಿದೆ. ಇದರಲ್ಲಿ ಹಲವು ಮನೆಗಳು ಮಣ್ಣು ಮತ್ತು ಕೆಸರಿನಡಿ ಹೂತುಹೋಗಿವೆ. ಐದು ಮಂದಿಯ ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದ್ದು, 17 ಜನರನ್ನು ರಕ್ಷಿಸಲಾಗಿದೆ ಎಂದು ಶಿಮ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಗಾಂಧಿ ತಿಳಿಸಿದ್ದಾರೆ.
ಸೋಲನ್ ಜಿಲ್ಲೆಯ ಜಾದೋನ್ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಮೇಘಸ್ಫೋಟದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಎರಡು ಮನೆಗಳು ಕೊಚ್ಚಿ ಹೋಗಿವೆ. ಆರು ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯ ಬಾಳೇರ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಕುಸಿತದಿಂದ ತಾತ್ಕಾಲಿಕ ಮನೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಒಂದು ಮಗುವಿನ ಮೃತದೇಹ ಪತ್ತೆಯಾಗಿದೆ. ರಾಮ್‌ಶೆಹರ್ ತಾಲ್ಲೂಕಿನ ಬನಾಲ್ ಗ್ರಾಮದಲ್ಲಿ ಭೂಕುಸಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಸೋಲನ್‌ನ ಉಪ ಆಯುಕ್ತ ಮನಮೋಹನ್ ಶರ್ಮಾ ತಿಳಿಸಿದ್ದಾರೆ.
ಶಾಲಾ– ಕಾಲೇಜುಗಳಿಗೆ ರಜೆ: ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ‘ಕಳೆದ 24 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು, ಕೆರೆಕಟ್ಟೆಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ –ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮಂಗಳವಾರ ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಎಚ್ಚರಿಕೆ ನೀಡಿದ್ದು, ಆಗಸ್ಟ್ 18ರವರೆಗೆ ರಾಜ್ಯದಲ್ಲಿ ಆರ್ದ್ರ ವಾತಾವರಣದ ಮುನ್ಸೂಚನೆ ನೀಡಿದೆ.
ಹಲವು ಮಂದಿ ಸಮಾಧಿಯಾಗಿರುವ ಶಂಕೆ: ಸಮ್ಮರ್ ಹಿಲ್ ಮತ್ತು ಫಗ್ಲಿ ಪ್ರದೇಶಗಳಲ್ಲಿ ಸಂಭವಿಸಿರುವ ಭೂಕುಸಿತಗಳಲ್ಲಿ ಅನೇಕ ಜನರು ಸಮಾಧಿಯಾಗಿರುವ ಆತಂಕವಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ ಎಂದು ಶಿಮ್ಲಾ ಜಿಲ್ಲಾಧಿಕಾರಿ ಆದಿತ್ಯ ನೇಗಿ ತಿಳಿಸಿದ್ದಾರೆ.
ಹಮೀರ್‌ಪುರ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಕಣ್ಮರೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಮರಾಜ್ ಬೈರ್ವಾ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಒಬ್ಬ ವ್ಯಕ್ತಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಮತ್ತೊಂದು ಘಟನೆಯಲ್ಲಿ ಮನೆ ಕುಸಿದು ಬಿದ್ದು ವೃದ್ಧೆಯೊಬ್ಬರು ಜೀವಂತ ಸಮಾಧಿಯಾಗಿದ್ದು, ಅವರ ಪುತ್ರನನ್ನು ರಕ್ಷಿಸಲಾಗಿದೆ. ಜಿಲ್ಲೆಯ ರಂಗಾಸ್ ಪ್ರದೇಶದಲ್ಲಿ ಭೂಕುಸಿತದಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನೂರಾರು ರಸ್ತೆಗಳು ಬಂದ್: ಸೋಲನ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಶಿಮ್ಲಾ–ಚಂಡೀಗಢ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಇದರಿಂದ ಶಿಮ್ಲಾ ಮತ್ತು ಸೋಲನ್ ಜಿಲ್ಲೆಗಳಿಗೆ ಅಗತ್ಯ ಸರಕುಗಳ ರವಾನೆಗೆ ತೊಡಕುಂಟಾಗಿದೆ. ಸೇಬು ಮತ್ತಿತರ ಹಣ್ಣುಗಳಿರುವ ನೂರಾರು ಟ್ರಕ್‌ಗಳು ಮತ್ತು ಬಸ್‌ಗಳು ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದು, ವಾಹನ ದಟ್ಟಣೆ ಉಂಟಾಗಿದೆ. ರಸ್ತೆ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಮಾಹಿತಿ ಪ್ರಕಾರ, ಮಂಡಿ ಜಿಲ್ಲೆಯೊಂದರಲ್ಲೇ 236, ಶಿಮ್ಲಾದಲ್ಲಿ 59 ಮತ್ತು ಬಿಲಾಸ್‌ಪುರ ಜಿಲ್ಲೆಯಲ್ಲಿ 40 ರಸ್ತೆಗಳು ಸೇರಿ ರಾಜ್ಯದಲ್ಲಿ 752 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.