ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿಗಳ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಆರಂಭವಾದ ಹಿಂಸಾಚಾರ ತೀವ್ರ ಸ್ವರೂಪ ಪಡೆದಿದೆ. 12 ಮಂದಿ ಸತ್ತಿದ್ದು, ಹಲವರು ಗಾಯಗೊಂಡಿದ್ದಾರೆ. ರಾಜ್ಯದ ವಿವಿಧೆಡೆ ಮತಪೆಟ್ಟಿಗೆಗಳನ್ನು ನಾಶಪಡಿಸಲಾಗಿದೆ.
ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರ ನಡುವೆ ಪರಸ್ಪರ ಹಲ್ಲೆ, ಹಿಂಸಾಚಾರ ಕೃತ್ಯಗಳು ನಡೆದಿವೆ. ಮೃತರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ 8, ಬಿಜೆಪಿ, ಕಾಂಗ್ರೆಸ್, ಸಿಪಿಎಂ ಮತ್ತು ಐಎಸ್‌ಎಫ್ ಪಕ್ಷದ ಒಬ್ಬರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತಪೆಟ್ಟಿಗೆಗಳ ನಾಶ, ನಕಲಿ ಹೆಸರಿನಲ್ಲಿ ಮತದಾನ ಯತ್ನ, ಮತದಾನಕ್ಕೆ ಅಡ್ಡಿ ಮಾಡಿದ ಪ್ರಕರಣಗಳು ವ್ಯಾಪಕವಾಗಿ ನಡೆದಿವೆ. ಹಿಂಸಾಕೃತ್ಯಗಳ ಮಧ್ಯೆಯೇ, ಚೆಂಡು ಎಂದು ಭಾವಿಸಿ ರಸ್ತೆಯಲ್ಲಿ ಬಿದ್ದಿದ್ದ ಕಚ್ಚಾ ಬಾಂಬ್ ಎತ್ತಿಕೊಂಡಿದ್ದ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಭಂಗೋರ್‌ನಲ್ಲಿ ಈ ಘಟನೆ ನಡೆದಿದೆ. ಕಚ್ಚಾ ಬಾಂಬ್ ಗಮನಿಸಿದ ಇಬ್ಬರು ಮಕ್ಕಳಲ್ಲಿ ಒಬ್ಬಾತ ಎತ್ತಿಕೊಂಡಿದ್ದು, ಕೂಡಲೇ ಸ್ಫೋಟಿಸಿದೆ. ಕೃತ್ಯದ ಹಿಂದೆಯೇ ಇನ್ನು ಬಾಂಬ್‌ಗಳಿರುವ ಶಂಕೆ ಹಿನ್ನೆಲೆಯಲ್ಲಿ ಪತ್ತೆಗೆ ಭದ್ರತಾ ಪಡೆ ನಿಯೋಜಿಸಲಾಗಿದೆ.
ಪಕ್ಷಗಳ ಖಂಡನೆ: ಚುನಾವಣೆ ಸಂಬಂಧಿತ ಹಿಂಸಾಚಾರಗಳನ್ನು ವಿವಿಧ ಪಕ್ಷಗಳು ಕಟುವಾಗಿ ಖಂಡಿಸಿವೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಿಜೆಪಿ ಆಗ್ರಹಿಸಿದೆ. ‘ಚುನಾವಣೆಯನ್ನು ಅಸಿಂಧು ಎಂದು ಘೋಷಿಸುವಂತೆ‘ ಕೋರಿ ಕಾಂಗ್ರೆಸ್ ಪಕ್ಷವು ಹೈಕೋರ್ಟ್ ಮೆಟ್ಟಿಲೇರಿದೆ.
ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್ ಅವರು, ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಬಾಂಬ್ ಸ್ಫೋಟ ಘಟನೆ ನಡೆದಿದ್ದ ಉತ್ತರ 24 ಪರಗಣ ಜಿಲ್ಲೆ ಸೇರಿ ವಿವಿಧೆಡೆಗೆ ಭೇಟಿ ನೀಡಿದ್ದು, ಪರಿಸ್ಥಿತಿಯ ಕುರಿತು ಪ್ರತ್ಯಕ್ಷದರ್ಶಿಗಳಿಂದ ವಿವರ ಪಡೆದಿದ್ದಾರೆ.
ಬಿಗಿ ಭದ್ರತೆಯಲ್ಲಿ ಮತದಾನ: ವಿವಿಧ ಜಿಲ್ಲೆಗಳಲ್ಲಿ ಮೂರು ಹಂತದ ಸ್ಥಳೀಯ ಪಂಚಾಯಿತಿಗಳಿಗೆ ಹಿಂಸಾಕೃತ್ಯಗಳ ನಡುವೆಯೇ ಬಿಗಿ ಭದ್ರತೆಯಲ್ಲಿ ಶನಿವಾರ ಮತದಾನ ನಡೆಯಿತು. ಒಟ್ಟು 73,887 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 2.06 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪ್ರಾಬಲ್ಯ ಪ್ರದರ್ಶನಕ್ಕೆ ವೇದಿಕೆ: 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಗಳಿಗೆ ಪ್ರಾಬಲ್ಯ ಸಾಬೀತುಪಡಿಸಲು, ಮತದಾರರ ನಾಡಿಮಿಡಿತ ಅರಿಯಲು ಇದು ವೇದಿಕೆ ಎಂದು ಭಾವಿಸಿರುವ ಕಾರಣ ಪಂಚಾಯಿತಿ ಚುನಾವಣೆಯು ಮಹತ್ವ ಪಡದುಕೊಂಡಿದೆ. ರಾಜ್ಯದಲ್ಲಿ ಮೂರನೇ ಅವಧಿಗೆ ಟಿಎಂಸಿ ಪಕ್ಷವು ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಎರಡು ವರ್ಷಗಳ ತರುವಾಯ ಈ ಚುನಾವಣೆ ನಡೆದಿದೆ.
ಆಡಳಿತಪಕ್ಷ ತೃಣಮೂಲ ಕಾಂಗ್ರೆಸ್, ಬಿಜೆಪಿ, ಸಿಪಿಎಂ ಪಕ್ಷಗಳು ಪ್ರಮುಖವಾಗಿ ಕಣದಲ್ಲಿದ್ದು, ಅಸ್ತಿತ್ವ ಸಾಬೀತಿಗೆ ಚುನಾವಣೆಯನ್ನು ಸವಾಲಾಗಿ ಪರಿಗಣಿಸಿವೆ. ರಾಜ್ಯದ 70 ಸಾವಿರ ಪೊಲೀಸರಲ್ಲದೆ, ಕೇಂದ್ರ ಮೀಸಲು ಪಡೆಯ 600 ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಟಿಎಂಸಿ ಆಡಳಿತದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಮರೀಚಿಕೆ. ಸಂವಿಧಾನದ ವಿಧಿ 355ರ ಅನ್ವಯ ರಾಷ್ಟ್ರಪತಿ ಆಡಳಿತ ಘೋಷಿಸಿ ಚುನಾವಣೆಯನ್ನು ನಡೆಸಬೇಕು.-ಸುವೇಂಧು ಅಧಿಕಾರಿ ವಿಧಾನಸಭೆ ಪ್ರತಿಪಕ್ಷದ ನಾಯಕ ಬಿಜೆಪಿ ಮುಖಂಡ
ಟಿಎಂಸಿ ಬೆಂಬಲಿತ ಗೂಂಡಾಗಳು ರಾಜ್ಯದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಜನರ ತೀರ್ಮಾನದ ಅಪಹರಣ ಬಹಿರಂಗವಾಗಿ ನಡೆದಿದೆ.-ಅಧೀರ್ ಚೌಧುರಿ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ
ಬಿಜೆಪಿ ಕಾಂಗ್ರೆಸ್ ಮತ್ತು ಸಿಪಿಎಂ ಕೈಜೋಡಿಸಿವೆ. ಕೇಂದ್ರ ಪಡೆಗಳಿಗೆ ಬೇಡಿಕೆ ಕಳುಹಿಸಿದರೂ ನಿಯೋಜಿಸುತ್ತಿಲ್ಲ. ಎಲ್ಲಿವೆ ಕೇಂದ್ರ ಮೀಸಲು ಪಡೆಗಳು? ಇಲ್ಲಿ ಟಿಎಂಸಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ.- ಶಶಿ ಪಂಜಾ ಹಿರಿಯ ಸಚಿವ ಟಿಎಂಸಿ ಮುಖಂಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.