ಇಂಫಾಲ್: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 11 ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರ ಮೀಸಲು ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್ ನಡೆದಿದೆ. ಶಂಕಿತ ಉಗ್ರರು ಮೈತೇಯಿ ಸಮುದಾಯದ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈತೇಯಿ ಪ್ರಾಬಲ್ಯದ ಇಂಫಾಲ್ ಮತ್ತು ಕುಕಿ ಪ್ರಾಬಲ್ಯವಿರುವ ಕಾಂಗ್‌ಪೋಕ್ಪಿ ಜಿಲ್ಲೆಯಾದ್ಯಂತ ಗುಂಡಿನ ದಾಳಿಗಳು ನಡೆಯುತ್ತಿರುವ ಬೆನ್ನಲ್ಲೇ ಈ ಎನ್‌ಕೌಂಟರ್ ನಡೆದಿದೆ.
ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಶನಿವಾರ ಭತ್ತದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆಯೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟಾಗಿತ್ತು.
ಕಳೆದ ವರ್ಷ ಮೇ 3ರಂದು ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ಆರಂಭವಾದಾಗಿನಿಂದಲೂ ನೂರಾರು ಮಂದಿಯನ್ನು ಹತ್ಯೆ ಮಾಡಲಾಗಿದೆ.
ಬಂದ್‌ಗೆ ಕರೆ
ಕುಕಿ–ಜೊ ಸಮುದಾಯಕ್ಕೆ ಸೇರಿದ ಸಂಘಟನೆಗಳ ಒಕ್ಕೂಟ ‘ಕುಕಿ ಜೊ ಕೌನ್ಸಿಲ್’ ಈ ಘಟನೆಯನ್ನು ಖಂಡಿಸಿದ್ದು, ಮಂಗಳವಾರ ಬೆಳಿಗ್ಗೆ 5ರಿಂದ ಸಂಜೆ 6ರ ವರೆಗೆ ಬಂದ್‌ಗೆ ಕರೆ ನೀಡಿದೆ. ಸಿಆರ್‌ಪಿಎಫ್ ಸಿಬ್ಬಂದಿಯು ‘ಗ್ರಾಮದ ಸ್ವಯಂ ಸೇವಕ’ರನ್ನು ಹತ್ಯೆ ಮಾಡಿದೆ ಎಂದು ಕೌನ್ಸಿಲ್ ಆರೋಪಿಸಿದೆ.
ಮೈತೇಯಿ ಸಮುದಾಯಕ್ಕೆ ಸೇರಿದವರು ಎನ್ನಲಾದ ಶಸ್ತ್ರಸಜ್ಜಿತ ಗುಂಪೊಂದು ಕಳೆದ ಶುಕ್ರವಾರ ಹಮರ್ ಸಮುದಾಯದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿ ಹತ್ಯೆ ಮಾಡಿತ್ತು. ಆ ಬಳಿಕ ಜಿರೀಬಾಮ್ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.