ಭುವನೇಶ್ವರ: ಒಡಿಶಾದ ಕಂಧಮಾಲ್ ಜಿಲ್ಲೆಯ ಬುಡಾನೈ ಮೀಸಲು ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಒಬ್ಬ ಮೃತಪಟ್ಟಿದ್ದಾನೆ.
ಭದ್ರತಾ ಪಡೆಗಳು, ನಕ್ಸಲರು ಅವಿತಿರುವ ಖಚಿತ ಮಾಹಿತಿ ಮೇರೆಗೆ ಅ.23ರ ಬುಧವಾರ ಶೋಧ ಕಾರ್ಯಾಚರಣೆ ಆರಂಭಿಸಿದವು.
ಶುಕ್ರವಾರ ಬೆಳಿಗ್ಗೆ 9 ಗಂಟೆಯ ಆಸುಪಾಸಿನಲ್ಲಿ ಅರಣ್ಯದೊಳಗೆ ವಿಶೇಷ ಕಾರ್ಯಾಚರಣೆ ಪಡೆಯ ಯೋಧರು ಮತ್ತು ನಕ್ಸಲರು ಮುಖಾಮುಖಿಯಾದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಒಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಚಕಮಕಿ ಬಳಿಕ ಭದ್ರತಾ ಸಿಬ್ಬಂದಿ ತಮ್ಮ ಶೋಧವನ್ನು ಮುಂದುವರಿಸಿದರು. ಈ ವೇಳೆ ನಕ್ಸಲ್‌ನ ಮೃತದೇಹ ಪತ್ತೆಯಾಗಿದೆ. ಜೊತೆಗೆ ಎಕೆ–47 ರೈಫಲ್ ಸಿಕ್ಕಿದೆ ಎಂದಿದ್ದಾರೆ.
ಮೃತನು ಕಂಧಮಾಲ್–ಕಾಳಹಂಡಿ–ಬೌಧ್–ನಾಯಗರ್ ವಿಭಾಗದ ನಕ್ಸಲ್ ಸಂಘಟನೆಯ ಹಿರಿಯನಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ತಮ್ಮ ಶೋಧ ಮುಂದುವರಿಸಿವೆ.
ಸ್ಫೋಟಕ ವಶ
ಗೊಂದಿಯಾ (ಪಿಟಿಐ): ಮಹಾರಾಷ್ಟ್ರದ ಗೊಂದಿಯಾ ಜಿಲ್ಲೆಯಲ್ಲಿ ನಕ್ಸಲರ ಅಡಗುತಾಣದಿಂದ ಜಿಲೆಟಿನ್ ಕಡ್ಡಿಗಳು, ಸ್ಫೋಟಕಗಳು ಹಾಗೂ ನಕ್ಸಲ್ ಸಾಹಿತ್ಯವನ್ನು ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.
ಸಾಲೆಕಸಾ ಪೊಲೀಸ್ ಠಾಣೆ ವ್ಯಾಪ್ತಿಯ ತಕೆಜಾರಿಯ ಬೆಟ್ಟಗಳಲ್ಲಿ ಅಡಗುತಾಣವನ್ನು ನಕ್ಸಲರು ಹೊಂದಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ತಂತಿಯ ಬಂಡಲ್‌ಗಳು, ಬ್ಯಾಟರಿಗಳು, ಕುಕ್ಕರ್, ಕಬ್ಬಿಣದ ಉಗುರು, ತುಂಡುಗಳು ಹಾಗೂ ಇತರ ವಸ್ತುಗಳು ಪತ್ತೆಯಾಗಿವೆ ಎಂದಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಪ್ರಕ್ರಿಯೆ ನಡೆದಿದ್ದು, ಪೊಲೀಸರ ಸಿ–60 ತಂಡ, ಬಾಂಬ್ ಪತ್ತೆ ದಳ ಹಾಗೂ ಶ್ವಾನದಳಗಳು ಮಧ್ಯಪ್ರದೇಶ ಮತ್ತು ಛತ್ತೀಸಗಢದ ಗಡಿಯಲ್ಲಿ ಗಸ್ತು ಹೆಚ್ಚಿಸಿವೆ.
ಛತ್ತೀಸಗಢ: ಆರು ನಕ್ಸಲರು ಶರಣು
ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ಆರು ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಮ್ಲು ಹೆಮ್ಲಾ ಅಲಿಯಾಸ್ ಪವನ್, ಇವರ ಪತ್ನಿ ಬಂಡಿ ದುಧಿ ಅಲಿಯಾಸ್ ಕಮ್ಲಾ ಮತ್ತು ಬಂಡಿ ಸೋಧಿ ಅಲಿಯಾಸ್ ಬಂಡು, ಮದ್ವಿ/ನಗ್ಲು ಸುಶೀಲಾ, ಕುಂಜಮ್ ರೋಷನ್ ಅಲಿಯಾಸ್ ಮಹದೇವ್ ಮತ್ತು ಕೋಟೇಶ್ ಸೋಧಿ ಅಲಿಯಾಸ್ ದಶ್ರು ಶರಣಾದವರು.
ಕಮ್ಲು, ಬಂಡಿ, ಬಂಡು, ಸುಶೀಲಾ ಅವರ ತಲೆಗೆ ತಲಾ ₹5 ಲಕ್ಷ ಹಾಗೂ ಮಹದೇವ್ ಮತ್ತು ದಶ್ರು ತಲೆಗೆ ತಲಾ ₹2 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಶರಣಾದವರಿಗೆ ಸರ್ಕಾರದ ಪುನರ್‌ವಸತಿ ಪ್ಯಾಕೇಜ್ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.