ನವದೆಹಲಿ: ‘ಗೂಗಲ್ ಮ್ಯಾಪ್ ಬಳಕೆ ನಿಲ್ಲಿಸಿ, ಒಂದು ವರ್ಷ ಓಲಾ ಮ್ಯಾಪ್‌ನ ಉಚಿತ ಬಳಕೆದಾರರಾಗಿ’ –ಹೀಗೆಂದು ಭಾರತೀಯ ಡೆವಲಪರ್‌ಗಳಿಗೆ ಓಲಾ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವೀಶ್ ಅಗರ್ವಾಲ್ ಅವರು ಮನವಿ ಮಾಡಿದ್ದಾರೆ.
‘ಪಾಶ್ಚಿಮಾತ್ಯರು ಅಭಿವೃದ್ಧಿಪಡಿಸಿದ ಆ್ಯಪ್‌ಗಳನ್ನು ನಾವು ಸುದೀರ್ಘ ಅವಧಿಯಿಂದ ಬಳಸುತ್ತಿದ್ದೇವೆ. ಆದರೆ, ಇಲ್ಲಿನ ಬೀದಿಗಳ ಹೆಸರುಗಳು, ನಗರದಲ್ಲಿ ಆಗಿಂದಾಗ್ಗೆ ಆಗುತ್ತಿರುವ ಬದಲಾವಣೆ, ಸಂಚಾರ ದಟ್ಟಣೆ, ಗುಣಮಟ್ಟವಲ್ಲದ ರಸ್ತೆಗಳು ಸೇರಿದಂತೆ ಇನ್ನಿತರ ಸವಾಲುಗಳು ಅವರಿಗೆ ಅರ್ಥವಾಗುವುದಿಲ್ಲ. ಕೃತಕ ಬುದ್ಧಿಮತ್ತೆಯ ಸಹಕಾರದೊಂದಿಗೆ ಓಲಾ ಅಭಿವೃದ್ಧಿಪಡಿಸಿರುವ ಮ್ಯಾಪ್ ಈ ಸವಾಲುಗಳನ್ನು ಮೆಟ್ಟಿ ನಿಂತಿದೆ’ ಎಂದು ತಮ್ಮ ‘ಎಕ್ಸ್’ ಪೋಸ್ಟ್‌ನಲ್ಲಿ ಭವೀಶ್ ಅಗರ್ವಾಲ್ ಬರೆದುಕೊಂಡಿದ್ದಾರೆ.
ಓಲಾ ಸಂಸ್ಥೆಯು ಮೈಕ್ರೋಸಾಫ್ಟ್‌ನ ಅಝೂರ್ ಕ್ಲೌಡ್ ಜೊತೆಗಿನ ನಂಟು ಕಡಿದುಕೊಂಡು, ತನ್ನದೇ ‘ಕೃತ್ರಿಮ್ ಎಐ’ ಸಂಸ್ಥೆಯ ಸೇವೆ ಬಳಸುವುದಾಗಿ ಇದೇ ವರ್ಷದ ಮೇ ತಿಂಗಳಿನಲ್ಲಿ ಘೋಷಿಸಿತ್ತು. ಕಳೆದ ವಾರವಷ್ಟೇ ಓಲಾ ಕ್ಯಾಬ್‌ಗಳು ಪೂರ್ಣವಾಗಿ ಗೂಗಲ್ ಮ್ಯಾಪ್ ಸೇವೆಯಿಂದ ಹೊರಬಂದಿದ್ದು, ತನ್ನದೇ ಆದ ಓಲಾ ಮ್ಯಾಪ್ ಬಳಸುತ್ತಿವೆ ಎಂದು ಕಂಪನಿ ಹೇಳಿತ್ತು.
ಕಳೆದ ತಿಂಗಳು ಅಝೂರೆ ಸೇವೆಯಿಂದ ಹೊರಬಂದೆವು. ಇದೀಗ ಗೂಗಲ್ ಮ್ಯಾಪ್ ಸೇವೆಯಿಂದಲೂ ಹೊರಬಂದಿದ್ದೇವೆ. ಈ ಎರಡೂ ಸೇವೆಗಳಿಗೆ ನಾವು ಪ್ರತಿ ವರ್ಷ ₹100 ಕೋಟಿ ವೆಚ್ಚ ಮಾಡುತ್ತಿದ್ದೆವು. ನಮ್ಮದೇ ಓಲಾ ಮ್ಯಾಪ್‌ನಿಂದ ನಮ್ಮ ಈ ತಿಂಗಳ ಖರ್ಚು ಶೂನ್ಯವಾಗಿದೆ.ಭವೀಶ್ ಅಗರ್ವಾಲ್ ಓಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.