ಲಾತೂರ್: ಮೀಸಲಾತಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟಿಸುತ್ತಿರುವ ಮರಾಠ ಸಮುದಾಯದ ಕೆಲ ನಾಯಕರು ಇಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದರು.
ಕಪ್ಪು ಬಾವುಟವನ್ನು ಪ್ರದರ್ಶಿಸಿದ ಸಂಬಂಧ ಪೊಲೀಸರು ಸಮುದಾಯದ ಏಳು ಮಂದಿ ಮುಖಂಡರನ್ನು ವಶಕ್ಕೆ ತೆಗೆದುಕೊಂಡರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇಲ್ಲಿನ ಹೋಟೆಲ್‌ವೊಂದಲ್ಲಿ ಏರ್ಪಡಿಸಲಾಗಿದ್ದ, ಅಜಿತ್ ಪವಾರ್ ಬಣದ ಎನ್‌ಸಿಪಿಯ ಜಿಲ್ಲಾ ಮಟ್ಟದ ಸಭೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ತಟ್ಕರೆ, ಸಚಿವ ಸಂಜಯ್ ಬಾನ್ಸೊಡೆ, ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣ್‌ಕರ್, ಪರಿಷತ್ ಸದಸ್ಯ ವಿಕ್ರಮ್ ಕಾಳೆ ಆಗಮಿಸಿದ್ದರು.
ಆಗ ಮರಾಠ ಸಮುದಾಯದ ಕೆಲ ಮುಖಂಡರು, ಮೀಸಲಾತಿ ಬೇಡಿಕೆ ಕುರಿತು ಗಮನಸೆಳೆಯಲು ಎನ್‌ಸಿಪಿ ಮುಖಂಡರ ವಿರುದ್ಧ ಘೋಷಣೆ ಕೂಗಿ, ಕಪ್ಪು ಬಾವುಟವನ್ನು ಪ್ರದರ್ಶಿಸಿದ್ದರು.
ಮರಾಠ ಸಮುದಾಯದವರಿಗೆ ಶಿಕ್ಷಣ ಮತ್ತು ಸರ್ಕಾರಿ ನೇಮಕಾತಿಯಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಕುರಿತ ಮಸೂದೆಯನ್ನು ರಾಜ್ಯ ವಿಧಾನಮಂಡಲ ಅಂಗೀಕರಿಸಿದೆ. ಆದರೆ, ಸಮುದಾಯವರಿಗೆ ಇತರೆ ಹಿಂದುಳಿದ ವರ್ಗ (ಒಬಿಸಿ) ವರ್ಗದಡಿಯೇ ಮೀಸಲಾತಿ ಕಲ್ಪಿಸಬೇಕು ಎಂದು ಹೋರಾಟಗಾರ ಮನೋಜ್ ಜರಾಂಗೆ ಪಟ್ಟುಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.