ಮುಂಬೈ: ರಾಜಕೀಯವಾಗಿ ಪ್ರಬಲವಾಗಿರುವ ಮರಾಠ ಸಮುದಾಯವು ಎರಡು ವರ್ಗಗಳ ಅಡಿಯಲ್ಲಿ ಮೀಸಲಾತಿ ಪಡೆಯುವ ಅವಕಾಶ ಇದೆಯಾದರೂ, ಮನೋಜ್ ಜರಾಂಗೆ ಅವರು ಫೆಬ್ರುವರಿ 24ರಿಂದ (ಶನಿವಾರ) ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ 10ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದ ಬೆನ್ನಲ್ಲೇ ಜರಾಂಗೆ ಅವರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಈ ಕುರಿತು ತಮ್ಮ ಸ್ವಗ್ರಾಮ ಅಂತರ್ವಾವಿ ಸಾರಥಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಕೇಳಿದ್ದನ್ನು ಸರ್ಕಾರ ನೀಡಿಲ್ಲ. ರಾಜಕೀಯ ಕಾರಣಗಳಿಗಾಗಿ ಈ ವಿಶೇಷ ಅಧಿವೇಶನ ನಡೆಸಲಾಗಿದೆ. ಮರಾಠರ ಹಿತಾಸಕ್ತಿಗಳನ್ನು ನಾವು ಸಂರಕ್ಷಿಸಬೇಕಾಗಿದೆ. ಪ್ರಸ್ತುತ ಸರ್ಕಾರದ ಮೀಸಲಾತಿಯು ಮೋಟರ್ ಸೈಕಲ್ ಕೊಟ್ಟು, ಪೆಟ್ರೋಲ್ ನೀಡದಂತಾಗಿದೆ. ಇದು ನಮಗೆ ಸ್ವೀಕಾರಾರ್ಹವಲ್ಲ’ ಎಂದು ತಿಳಿಸಿದ್ದಾರೆ.
‘ಮರಾಠರನ್ನು ಕುಣಬಿಗಳೆಂದು ಘೋಷಿಸಿ, ಒಬಿಸಿ ಮೀಸಲಾತಿಯಿಂದ ನಮಗೆ ಪ್ರತ್ಯೇಕ ಮೀಸಲಾತಿ ನೀಡಬೇಕು ಹಾಗೂ ಅವರನ್ನು (ಮರಾಠರು ಮತ್ತು ಕುಣಬಿಗಳು) ಸಗೆ– ಸೋಯಾರೆ (ವಂಶವೃಕ್ಷದ ಸಂಬಂಧಿಕರು) ಎಂದು ತಿಳಿಸುವ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಬೇಕೆನ್ನುವ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು’ ಎಂದಿದ್ದಾರೆ.
‘ನಮ್ಮ ಮೂಲ ಬೇಡಿಕೆಯ ಪ್ರಕಾರ ಮೀಸಲಾತಿ ನೀಡುವವರೆಗೂ ಸರ್ಕಾರವು ಚುನಾವಣೆಗಳನ್ನು ಸಹ ನಡೆಸಬಾರದು’ ಎಂದೂ ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.