ADVERTISEMENT

ಮಹಾರಾಷ್ಟ್ರ: ಶೇ 10ರಷ್ಟು ಮರಾಠ ಮೀಸಲು ಮಸೂದೆಗೆ ‘ಅಸ್ತು’

ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಅಂಗೀಕಾರ * ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ

ಪಿಟಿಐ
Published 20 ಫೆಬ್ರುವರಿ 2024, 9:32 IST
Last Updated 20 ಫೆಬ್ರುವರಿ 2024, 9:32 IST
<div class="paragraphs"><p>ಮರಾಠ ಮೀಸಲಾತಿ ಮಸೂದೆಯು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕಾರವಾದ ಬಳಿಕ ಮುಂಬೈನಲ್ಲಿ ಜನರು ಸಂಭ್ರಮಿಸಿದರು.</p></div>

ಮರಾಠ ಮೀಸಲಾತಿ ಮಸೂದೆಯು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕಾರವಾದ ಬಳಿಕ ಮುಂಬೈನಲ್ಲಿ ಜನರು ಸಂಭ್ರಮಿಸಿದರು.

   

–ಪಿಟಿಐ ಚಿತ್ರ

ಮುಂಬೈ: ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ 10ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದವು.

ADVERTISEMENT

ಮರಾಠ ಕೋಟಾ ಕುರಿತು ಮಂಗಳವಾರ ನಡೆದ ರಾಜ್ಯ ವಿಧಾನ ಮಂಡಲದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ‘ಮಹಾರಾಷ್ಟ್ರ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ಮಸೂದೆ 2024’ ಅನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಮಹಾರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಶೇ 28ರಷ್ಟು ಮರಾಠ ಸಮುದಾಯಕ್ಕೆ ಸೇರಿದವರು ಎಂಬ ಮಾಹಿತಿಯನ್ನು ಈ ವೇಳೆ ನೀಡಲಾಯಿತು.

ಒಬಿಸಿ ಬಿಟ್ಟು ಪ್ರತ್ಯೇಕ ಕೋಟಾ: ರಾಜ್ಯದಲ್ಲಿ ಈಗಾಗಲೇ ಹಲವು ಜಾತಿ ಮತ್ತು ಗುಂಪುಗಳು ಮೀಸಲು ವರ್ಗಗಳಲ್ಲಿದ್ದು, ಒಟ್ಟಾರೆ ಮೀಸಲಾತಿ ಪ್ರಮಾಣ ಶೇ 52ರಷ್ಟಿದೆ. ಹೀಗಾಗಿ ಮರಾಠ ಸಮುದಾಯವನ್ನೂ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿಸುವುದು ಸಂಪೂರ್ಣ ಅಸಮಾನತೆಗೆ ಕಾರಣವಾಗುತ್ತದೆ ಎಂದು ಸರ್ಕಾರ ಹೇಳಿದೆ. 

ಮರಾಠ ವರ್ಗದ ಹಿಂದುಳಿದಿರುವಿಕೆಯು ಹಿಂದುಳಿದ ವರ್ಗಗಳಿಗಿಂತ, ಅದರಲ್ಲೂ ಇತರ ಹಿಂದುಳಿದ ವರ್ಗಗಳಿಗಿಂತ (ಒಬಿಸಿ) ಭಿನ್ನ ಮತ್ತು ವ್ಯಾಪಕವಾಗಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಮೀಸಲಾತಿ ಜಾರಿಯಾದ 10 ವರ್ಷಗಳ ಬಳಿಕ ಈ ಕುರಿತು ಪರಿಶೀಲನೆ ನಡೆಸಬೇಕು ಎಂಬ ಅಂಶವನ್ನೂ ಅದರಲ್ಲಿ ಪ್ರಸ್ತಾಪಿಸಲಾಗಿದೆ.

‘ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿ ಇರುವ ಒಬಿಸಿ ಕೋಟಾವನ್ನು ಮುಟ್ಟದೆ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ನಾವು ಬಯಸಿದ್ದೇವೆ. ಈ ಸಮುದಾಯದವರು ಸುಮಾರು 40 ವರ್ಷಗಳಿಂದ ಮೀಸಲಾತಿ ಪ್ರಯೋಜನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ ಮೀಸಲಾತಿ ಪ್ರಮಾಣ ಶೇ 52ರಷ್ಟಿದೆ. ಇದರಲ್ಲಿ ಪರಿಶಿಷ್ಟ ಜಾತಿಗಳು ಶೇ 13, ಪರಿಶಿಷ್ಟ ಪಂಗಡಗಳು ಶೇ 7, ಒಬಿಸಿ ಶೇ 19, ವಿಶೇಷ ಹಿಂದುಳಿದ ವರ್ಗಗಳಿಗೆ ಶೇ 2, ವಿಮುಕ್ತ ಜಾತಿಗೆ ಶೇ 3, ಅಲೆಮಾರಿ ಬುಡಕಟ್ಟು (ಬಿ) ಶೇ 2.5, ಅಲೆಮಾರಿ ಬುಡಕಟ್ಟು (ಸಿ) ಧಂಗರ್‌ ಶೇ 3.5 ಮತ್ತು ಅಲೆಮಾರಿ ಬುಡಕಟ್ಟು (ಡಿ) ವಂಜರಿ ಶೇ 2 ರಷ್ಟು ಮೀಸಲಾತಿ ಹೊಂದಿವೆ.

22 ರಾಜ್ಯಗಳಲ್ಲಿ ಶೇ 50 ಮೀರಿರುವ ಮೀಸಲಾತಿ: ದೇಶದ 22 ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣವು ಶೇ 50ರಷ್ಟು ಗಡಿಯನ್ನು ದಾಟಿದೆ ಎಂಬ ಅಂಶವನ್ನು ಮುಖ್ಯಮಂತ್ರಿ ಶಿಂದೆ ಅವರು ಮಸೂದೆ ಮಂಡನೆ ವೇಳೆ ಉಲ್ಲೇಖಿಸಿದರು. ಈ ಪೈಕಿ ತಮಿಳುನಾಡಿನಲ್ಲಿ ಶೇ 69, ಹರಿಯಾಣದಲ್ಲಿ ಶೇ 67, ರಾಜಸ್ಥಾನದಲ್ಲಿ ಶೇ 64, ಬಿಹಾರದಲ್ಲಿ ಶೇ 69, ಗುಜರಾತ್‌ನಲ್ಲಿ ಶೇ 59 ಹಾಗೂ ಪಶ್ಚಿಮ ಬಂಗಾಳದಲ್ಲಿ ಮೀಸಲಾತಿ ಪ್ರಮಾಣದ ಶೇ 55ರಷ್ಟಿದೆ ಎಂದು ಶಿಂದೆ ಮಾಹಿತಿ ನೀಡಿದರು. 

ರಾಜ್ಯದಲ್ಲಿ ಶೇ 28ರಷ್ಟು ಮರಾಠರು: ರಾಜ್ಯದ ಜನಸಂಖ್ಯೆಯಲ್ಲಿ ಮರಾಠ ಸಮುದಾಯಕ್ಕೆ ಸೇರಿದ ಶೇ 28ರಷ್ಟು ಜನರಿದ್ದಾರೆ. ಮರಾಠ ಸಮುದಾಯದವರಲ್ಲಿ ಶೇ 21.22ರಷ್ಟು ಕುಟುಂಬಗಳು ಬಡತನ ರೇಖೆಗಿಂತ (ಬಿಪಿಎಲ್‌) ಕೆಳಗಿದ್ದು, ಹಳದಿ ಪಡಿತರ ಚೀಟಿ ಹೊಂದಿವೆ. ಇದು ರಾಜ್ಯದ ಸರಸಾರಿ ಶೇ 17.4ಕ್ಕಿಂತ ಹೆಚ್ಚಾಗಿದೆ ಎಂಬ ಅಂಶವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಮರಾಠ ಕೋಟಾ ಒಬಿಸಿ ಅಡಿಯಿರಬೇಕು: ಜಾರಂಗೆ

ಛತ್ರಪತಿ ಸಾಂಭಾಜಿನಗರ (ಪಿಟಿಐ): ‘ಮಹಾರಾಷ್ಟ್ರ ಸರ್ಕಾರವು ಮರಾಠ ಸಮುದಾಯಕ್ಕೆ ಶೇ 10 ಅಥವಾ ಶೇ 20ರಷ್ಟು ಮೀಸಲಾತಿ ನೀಡಿದೆ ಎನ್ನುವುದು ಮುಖ್ಯವಲ್ಲ. ಆ ಮೀಸಲು ಕೋಟಾ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಇರಬೇಕೇ ಹೊರತು ಪ್ರತ್ಯೇಕವಾಗಿ ಅಲ್ಲ’ ಎಂದು ಮರಾಠ ಮೀಸಲಾತಿ ಹೋರಾಟ ಗಾರ ಮನೋಜ್‌ ಜರಾಂಗೆ ಹೇಳಿದರು.

ಜಲ್ನಾ ಜಿಲ್ಲೆಯ ಅಂತವಾಲಿ ಸಾರಥಿ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸರ್ಕಾರ ನಮಗೆ ಬೇಡವಾದದ್ದನ್ನು ನೀಡುತ್ತಿದೆ. ನಮಗೆ ಒಬಿಸಿ ಅಡಿಯಲ್ಲಿ ಮೀಸಲಾತಿ ಬೇಕು. ಪ್ರತ್ಯೇಕ ಕೋಟಾ ಅಲ್ಲ’ ಎಂದರು.

‘ಮೀಸಲಾತಿ ಪ್ರಮಾಣವು ಶೇ 50ರಷ್ಟನ್ನು ಮೀರುವಂತಿಲ್ಲ. ಹೀಗಿರುವಾಗ ಒಬಿಸಿಯಿಂದ ಪ್ರತ್ಯೇಕ ಮೀಸಲಾತಿ ಕಲ್ಪಿಸುವುದು ಕಾನೂನು ಅಡೆ–ತಡೆಗಳಿಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ’ ಎಂದು ಅವರು ಹೇಳಿದರು.

‘ಕುಣಬಿ ಮರಾಠ ರಕ್ತ ಸಂಬಂಧಿಗಳ ಕುರಿತು ಸರ್ಕಾರ ತನ್ನ ಕರಡು ಅಧಿಸೂಚನೆಯನ್ನು ಕಾನೂನಾಗಿ ಪರಿವರ್ತಿಸುತ್ತದೆಯಾ ಎಂಬುದನ್ನು ಕಾದು ನೋಡುತ್ತಿದ್ದೇನೆ. ಬಳಿಕ ತನ್ನ ಆಂದೋಲನ ಹಾದಿಯನ್ನು ನಿರ್ಧರಿಸುತ್ತೇನೆ’ ಎಂದರು. 

ಮರಾಠ ಕೋಟಾ ಮಸೂದೆಯು ಈ ಹಿಂದೆ ತಂದಿದ್ದ ಶಾಸನವನ್ನೇ ಹೋಲುತ್ತದೆ. ಹೀಗಾಗಿ ಅದು ಸುಪ್ರೀಂಕೋರ್ಟ್‌ನಲ್ಲಿ ಏನಾಗುತ್ತದೆ ಎಂಬುದನ್ನು ನೋಡಬೇಕಿದೆ.
–ಶರದ್‌ ಪವಾರ್‌ ಎನ್‌ಸಿಪಿ ಸಂಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.