ಮುಂಬೈ: ‘ಮರಾಠ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರಕ್ಕೆ 40 ದಿನಗಳ ಗಡುವು ನೀಡಿದ್ದು, ಅವಧಿಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ ನಮ್ಮ ಸಮುದಾಯದವರು ಸುಮ್ಮನೆ ಕೂರುವುದಿಲ್ಲ’ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹಿಂದುಳಿದ ವರ್ಗದ ಅಡಿಯಲ್ಲಿ ಮರಾಠ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಾರಂಗೆ, ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಮುಖ್ಯಮಂತ್ರಿ ಏಕನಾಥ ಶಿಂದೆ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಉಪವಾಸ ಕೈಬಿಟ್ಟಿದ್ದರು. ಅಲ್ಲದೇ ಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ 40 ದಿನಗಳ ಗಡುವು ನೀಡಿದ್ದರು.
ಯೋಲಾದಲ್ಲಿ ‘ಸಕಲ ಮರಾಠ ಸಮಾಜ’ ಆಯೋಜಿಸಿದ್ದ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಜಾರಂಗೆ, ‘ಮರಾಠ ಮೀಸಲಾತಿ ಜಾರಿಗೊಳಿಸಲು ಕಾನೂನಿನಲ್ಲಿ ಹಲವಾರು ತೊಡಕಿದ್ದು, ಅದನ್ನು ಪರಿಶೀಲಿಸಬೇಕು ಎಂದಿದ್ದರು. ಅವರು 30 ದಿನ ಕಾಲಾವಕಾಶ ಕೇಳಿದ್ದು, ನಾವು 40 ದಿನ ನೀಡಿದ್ದೇವೆ. ಅವರಿಗೆ ಕೊಟ್ಟ ಸಮಯ ಮುಗಿದ ಮೇಲೆ ನಾವು ಸುಮ್ಮನೆ ಕೂರಲಾಗುವುದಿಲ್ಲ’ ಎಂದು ಗುಡುಗಿದರು.
‘ಮೀಸಲಾತಿ ನಮ್ಮ ಹಕ್ಕಾಗಿದ್ದು, ಅದು ಸಿಗುವರೆಗೂ ನಾವು ವಿಶ್ರಮಿಸುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.