ADVERTISEMENT

ಅಹಂ, ಕೋಪಕ್ಕೆ ಇದು ಸಮಯವಲ್ಲ: ಟಿಎಂಸಿ ಉದ್ದೇಶಿಸಿ ಮಾರ್ಗರೇಟ್ ಆಳ್ವ ಹೇಳಿಕೆ

ಪಿಟಿಐ
Published 22 ಜುಲೈ 2022, 13:41 IST
Last Updated 22 ಜುಲೈ 2022, 13:41 IST
ಮಾರ್ಗರೇಟ್ ಆಳ್ವ – ಪಿಟಿಐ ಚಿತ್ರ
ಮಾರ್ಗರೇಟ್ ಆಳ್ವ – ಪಿಟಿಐ ಚಿತ್ರ   

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಭಾಗಿಯಾಗದಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ನಿರ್ಧಾರ ನಿರಾಶಾದಾಯಕ ಎಂದು ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವ ಹೇಳಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ಟಿಎಂಸಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅಹಂ, ಪ್ರತಿಷ್ಠೆ ಹಾಗೂ ಕೋಪಕ್ಕೆ ಇದು ಸಮಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಉಪರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯುವ ಟಿಎಂಸಿ ನಿರ್ಧಾರ ನಿರಾಶಾದಾಯಕ. ಇದು ಪ್ರತಿಷ್ಠೆ, ಅಹಂ, ಕೋಪ ಪ್ರದರ್ಶನಕ್ಕೆ ಸಮಯವಲ್ಲ. ಧೈರ್ಯ, ನಾಯಕತ್ವ ಹಾಗೂ ಒಗ್ಗಟ್ಟು ಪ್ರದರ್ಶನಕ್ಕೆ ಸಕಾಲ. ಧೈರ್ಯದ ಪ್ರತಿರೂಪವಾಗಿರುವ ಮಮತಾ ಬ್ಯಾನರ್ಜಿ ಪ್ರತಿಪಕ್ಷಗಳ ಜತೆ ನಿಲ್ಲಲಿದ್ದಾರೆ ಎಂಬುದಾಗಿ ಭಾವಿಸುತ್ತೇನೆ’ ಎಂದು ಮಾರ್ಗರೇಟ್ ಆಳ್ವ ಟ್ವೀಟ್ ಮಾಡಿದ್ದಾರೆ.

ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಅವರನ್ನು ಆಯ್ಕೆ ಮಾಡುವ ವೇಳೆ ತಮ್ಮ ಪಕ್ಷದ ಜೊತೆ ಸಮಾಲೋಚನೆ ನಡೆಸಿಲ್ಲ ಎಂದು ಟಿಎಂಸಿ ಆರೋಪಿಸಿತ್ತು. ಜುಲೈ 17ರಂದು ಸಭೆ ನಡೆಸಿದ್ದ ಪ್ರತಿಪಕ್ಷಗಳ ನಾಯಕರು ಆಳ್ವ ಅವರನ್ನು ಒಮ್ಮತದ ಅಭ್ಯರ್ಥಿ ಎಂದು ಪ್ರಕಟಿಸಿದ್ದರು. ಈ ಸಭೆಯಲ್ಲಿ ಟಿಎಂಸಿ ಭಾಗಿಯಾಗಿರಲಿಲ್ಲ.

ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಸ್ಪಷ್ಟಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.