ಕೇಂದ್ರಪಾರ (ಒಡಿಶಾ): ಆಲಿವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯ ವಾರ್ಷಿಕ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ಒಡಿಶಾ ಸರ್ಕಾರವು ಶುಕ್ರವಾರ ಢಮಾರಾ, ದೇವಿ ನದಿಯ ಮುಖಾಂತರ ಕರಾವಳಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರಿಕೆ ಚಟುವಟಿಕೆಯನ್ನು ಏಳು ತಿಂಗಳ ಕಾಲ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀನುಗಾರಿಕೆ ನಿಷೇಧವು ನವೆಂಬರ್ 1ರಿಂದ 2025ರ ಮೇ 31 ರವರೆಗೆ ಜಾರಿಯಲ್ಲಿರುತ್ತದೆ. ಆಲಿವ್ ರಿಡ್ಲಿ ಆಮೆಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಅವುಗಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಢಮಾರಾ, ದೇವಿ ನದಿಯ ಮುಖಾಂತರ ಕರಾವಳಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ಒಡಿಶಾ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆ (ಒಎಂಎಫ್‌ಆರ್‌ಎ), 1972 ಮತ್ತು 1982ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಬಂಧನೆ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಮೀನುಗಾರಿಕೆ ಬಲೆಗಳಿಗೆ ಸಿಲುಕಿ ಅಥವಾ ಮೀನುಗಾರಿಕೆ ದೋಣಿಯ ಪ್ರೊಪೆಲ್ಲರ್‌ಗಳಿಗೆ ಸಿಲುಕಿ ಆಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಶವಾಗುವುದರಿಂದ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ ಕಾವಲು ಸಿಬ್ಬಂದಿಯ ಜತೆಗೆ ಅರಣ್ಯ, ಮೀನುಗಾರಿಕೆ ಮತ್ತು ಪೊಲೀಸರು ಗಸ್ತು ತಿರುಗುವಿಕೆಯಲ್ಲಿ ಭಾಗವಹಿಸಲಿದ್ದು, ಇವರಿಗಾಗಿ ವನ್ಯಜೀವಿ ವಿಭಾಗಗಳಾದ ಭದ್ರಕ್, ರಾಜನಗರ, ಪುರಿ ಮತ್ತು ಬೆರ್ಹಾಂಪುರದಲ್ಲಿ ಶಿಬಿರಗಳನ್ನು ಸ್ಥಾಪಿಸಲಾಗಿದೆ.
ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಸುಮಾರು 10,666 ಮೀನುಗಾರರ ಕುಟುಂಬಗಳು ತೊಂದರೆಗೊಳಗಾಗಲಿವೆ. ಆದ್ದರಿಂದ ನಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಸಂತ್ರಸ್ತ ಮೀನುಗಾರರ ಕುಟುಂಬಗಳಿಗೆ ₹7,500 ನೆರವು ನೀಡಲು ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.