ನವದೆಹಲಿ: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375ರಲ್ಲಿರುವ ವೈವಾಹಿಕ ಅತ್ಯಾಚಾರವನ್ನು ಅಪರಾಧ ಮುಕ್ತಗೊಳಿಸುವ 2ನೇ ವಿನಾಯಿತಿಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಭಿನ್ನ ತೀರ್ಪು ಪ್ರಕಟಿಸಿದೆ.
ಪತ್ನಿಯ ಸಮ್ಮತಿ ಇಲ್ಲದೆ ನಡೆಸುವ ಒತ್ತಾಯದ ಲೈಂಗಿಕತೆಯಲ್ಲಿ ಪತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದರಿಂದ ವಿನಾಯಿತಿ ನೀಡುವುದು ಅಸಂವಿಧಾನಿಕ ಎಂದು ನ್ಯಾಯಮೂರ್ತಿ ರಾಜೀವ್ ಶಕ್ಧರ್ ಹೇಳಿದ್ದಾರೆ.
ಸೆಕ್ಷನ್ 375ರ 2ನೇ ವಿನಾಯಿತಿಯಿಂದ ಸಂವಿಧಾನದ ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಮೂರ್ತಿ ಹರಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಇಬ್ಬರೂ ನ್ಯಾಯಮೂರ್ತಿಗಳ ತೀರ್ಪು ಭಿನ್ನವಾಗಿರುವುದರಿಂದ 'ವೈವಾಹಿಕ ಅತ್ಯಾಚಾರ' ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ವರ್ಗಾಯಿಸಲಾಗುತ್ತದೆ. ಪ್ರಕರಣದಲ್ಲಿ ಕಾನೂನಿನ ವಿಚಾರಗಳು ಅಡಗಿರುವುದರಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಫೆಬ್ರುವರಿಯಲ್ಲಿ ಅರ್ಜಿಗಳ ವಿಚಾರಣೆಯನ್ನು ಮುಕ್ತಾಯಗೊಳಿಸಿದ್ದ ನ್ಯಾಯಪೀಠವು ತೀರ್ಪು ಕಾಯ್ದಿರಿಸಿತ್ತು.
‘ಪತ್ನಿಯ ಸಮ್ಮತಿ ಇಲ್ಲದೆ ನಡೆಸುವ ಲೈಂಗಿಕತೆ ಅತ್ಯಾಚಾರಕ್ಕೆ ಸಮಾನ’ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲಾದ ಮೇಲ್ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಪ್ರಕರಣದ ಪ್ರತಿವಾದಿ ಸಂತ್ರಸ್ತೆಗೆ ನೋಟಿಸ್ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.