ನವದೆಹಲಿ: ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ಕಾರುಗಳ ಸಗಟು ಮಾರಾಟದಲ್ಲಿ ಶೇ 3ರಷ್ಟು ಹೆಚ್ಚಳವಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತಿಳಿಸಿದೆ.
ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿಯು ಸೆಪ್ಟೆಂಬರ್‌ನಲ್ಲಿ ಒಟ್ಟು 1.81 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಒಟ್ಟು 1.76 ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು. ಇದು ಈವರೆಗೆ ತಿಂಗಳೊಂದರಲ್ಲಿ ಆಗಿರುವ ಗರಿಷ್ಠ ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ.
ದೇಶೀಯವಾಗಿಯೂ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಹೆಚ್ಚಳಲಾಗಿದೆ. ಸೆಪ್ಟೆಂಬರ್‌ನಲ್ಲಿ ಒಟ್ಟು 1.51 ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ತಿಂಗಳಿನ ವಹಿವಾಟಿಗೆ ಹೋಲಿಸಿದರೆ ಶೇ 2ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದೆ.
ಅಲ್ಲದೇ, ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಮಾರಾಟವಾಗಿರುವ ಕಂಪನಿಯ ಕಾರುಗಳ ಸಂಖ್ಯೆ 10 ಲಕ್ಷ ದಾಟಿದೆ.
ಪ್ರಸಕ್ತ ಆರ್ಥಿಕ ವರ್ಷದ ಮೊದಲ ಅರ್ಧದಲ್ಲಿ 10.50 ಲಕ್ಷ ಕಾರುಗಳು ಮಾರಾಟವಾಗಿವೆ. 2022ರಲ್ಲಿ ಇದೇ ಅವಧಿಯಲ್ಲಿ ಒಟ್ಟು 9.85 ಲಕ್ಷ ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಮೊದಲಾರ್ಧದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕಾರುಗಳ ಮಾರಾಟವು ದಾಖಲೆ ಬರೆದಿದೆ ಎಂದು ವಿವರಿಸಿದೆ.
ಆದರೆ, ಆಲ್ಟೊ ಹಾಗೂ ಎಸ್–ಪ್ರೆಸ್ಸೊ ಕಾರುಗಳ ಮಾರಾಟ ಹೆಚ್ಚಳವಾಗಿಲ್ಲ. ಕೇವಲ 10,351 ಕಾರುಗಳಷ್ಟೇ ಮಾರಾಟವಾಗಿವೆ. ಕಳೆದ ಸಾಲಿಗೆ ಹೋಲಿಸಿದರೆ ಈ ಮಾದರಿಯ ಕಾರುಗಳ ಮಾರಾಟವು ಶೇ 65ರಷ್ಟು ಕುಸಿತವಾಗಿದೆ. ಅಲ್ಲದೇ, ಸಣ್ಣ ಕಾರುಗಳ ಮಾರಾಟವೂ ಕಡಿಮೆಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.