ADVERTISEMENT

ರಾಜೌರಿ, ಪೂಂಚ್‌ನ ದಟ್ಟಾರಣ್ಯದಲ್ಲಿ ಅಡಗಿರುವ ಉಗ್ರರ ಬೇಟೆಗೆ ಭಾರೀ ಕಾರ್ಯಾಚರಣೆ

ಪಿಟಿಐ
Published 12 ಅಕ್ಟೋಬರ್ 2021, 10:16 IST
Last Updated 12 ಅಕ್ಟೋಬರ್ 2021, 10:16 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಮತ್ತು ಪೂಂಚ್‌ ಜಿಲ್ಲೆಗಳ ಅರಣ್ಯದಲ್ಲಿ ಅಡಗಿರುವ ಭಯೋತ್ಪಾದಕರ ಪತ್ತೆಗಾಗಿ ಭದ್ರತಾ ಪಡೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ನಿನ್ನೆ ಉಗ್ರರ ಜೊತೆಗಿನ ಕಾಳಗದಲ್ಲಿ ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದಂತೆ ಐವರು ಸೈನಿಕರು ಹುತಾತ್ಮರಾಗಿದ್ದ ಜಮ್ಮು ಮತ್ತು ಕಾಶ್ಮೀರದ ಅವಳಿ ಗಡಿ ಜಿಲ್ಲೆಗಳಾದ ರಾಜೌರಿ ಮತ್ತು ಪೂಂಚ್ ಅನ್ನು ಸಂಪರ್ಕಿಸುವ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಾರೀ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿವೆ.

ಪೂಂಚ್‌ನ ಸುರಂಕೋಟೆ ದಟ್ಟ ಅರಣ್ಯ ಪ್ರದೇಶಗಳು ಮತ್ತು ಸಮೀಪದ ರಾಜೌರಿಯ ಥಾನಮಂಡಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಜೊತೆ ಸದ್ಯ ಯಾವುದೇ ಗುಂಡಿನ ಚಕಮಕಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ಸುರಂಕೋಟೆಯ ಡೇರಾ ಕಿ ಗಲಿ (ಡಿಕೆಜಿ) ಸಮೀಪದ ಹಳ್ಳಿಯಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳ ಮೇಲೆ ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಭಯೋತ್ಪಾದಕರ ಗುಂಪು ಗುಂಡಿನ ದಾಳಿ ನಡೆಸಿತ್ತು. ಘಟನೆಯಲ್ಲಿ ಜೆಸಿಒ ಸೇರಿದಂತೆ ಐವರು ಸೈನಿಕರು ಹುತಾತ್ಮರಾಗಿದ್ದರು.

ADVERTISEMENT

ದಾಳಿ ಬಳಿಕ ಭಯೋತ್ಪಾದಕರು ರಾಜೌರಿಯ ಥಾನಮಂಡಿಯ ವ್ಯಾಪ್ತಿಯಲ್ಲಿರುವ ಹತ್ತಿರದ ಪಾಂಘೈ ಅರಣ್ಯಕ್ಕೆ ಓಡಿಹೋಗಿದ್ದು, ಅವರನ್ನು ಬೆನ್ನಟ್ಟಿದ ಯೋಧರು ಗುಂಡಿನ ದಾಳಿ ನಡೆಸಿದ್ದರು.

ಭಯೋತ್ಪಾದಕರು ದಟ್ಟ ಅರಣ್ಯದ ಲಾಭ ಪಡೆದು ಪರಾರಿಯಾದ ನಂತರ ಸೋಮವಾರ ಸಂಜೆ ಗುಂಡಿನ ಚಕಮಕಿ ನಿಂತಿತ್ತು. ಸದ್ಯ, ಇಡೀ ಅರಣ್ಯ ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ಅಡಗಿರುವ ಭಯೋತ್ಪಾದಕರನ್ನು ಹೊಡೆದುರುಳಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಲು ಹಿರಿಯ ಪೊಲೀಸ್ ಮತ್ತು ಸೇನಾ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯರಾತ್ರಿಯಿಂದ ಪೂಂಚ್-ರಜೌರಿ ಜಿಲ್ಲೆಗಳ ಗಡಿಯ ಸಮೀಪದ ಶಹಾದರಾ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.