ಮಥುರಾ: ಹುರುಳಿ ಹಿಟ್ಟಿನಿಂದ ಮಾಡಿದ ತಿನಿಸು ಸೇವಿಸಿದವರಲ್ಲಿ 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಸೋಮವಾರ ರಾತ್ರಿಯವರೆಗೆ ಉಪವಾಸ ಇದ್ದ ಭಕ್ತರು, ನಂತರ ಮಥುರಾದ ದೇಗುಲದ ಹೊರಗಿನ ಎರಡು ಅಂಗಡಿಗಳಲ್ಲಿ ಪೂರಿಗಳು ಹಾಗೂ ಪಕೋಡಗಳನ್ನು ಸೇವಿಸಿದರು. ಹುರುಳಿ ಹಿಟ್ಟಿನಿಂದ ಆ ತಿನಿಸುಗಳನ್ನು ಮಾಡಲಾಗಿತ್ತು. ತಿಂದ ಸ್ವಲ್ಪ ಸಮಯದ ನಂತರ ವಾಂತಿ, ತಲೆಸುತ್ತುವಿಕೆ ಶುರುವಾಯಿತು. ಜಿಲ್ಲಾ ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳ ತಂಡವು ದಾಳಿ ಮಾಡಿ, ಹಾಳಾಗಿದ್ದ ಹಿಟ್ಟನ್ನು ಬಳಸಿ ಮಾಡಿದ್ದ ತಿನಿಸುಗಳನ್ನು ಪರಿಶೀಲಿಸಿತು. ಎರಡೂ ಅಂಗಡಿಗಳಿಗೆ ಬೀಗ ಜಡಿದು, ಮೊಹರು ಹಾಕಿತು.
‘ಹುರುಳಿ ಹಿಟ್ಟಿನಿಂದ ಮಾಡಿದ್ದ ಪಕೋಡ ತಿಂದೆ. ಸ್ವಲ್ಪ ಹೊತ್ತಿನ ನಂತರ ಹೊಟ್ಟೆಯಲ್ಲಿ ಉರಿ ಶುರುವಾಯಿತು. ವಾಂತಿ ಮಾಡತೊಡಗಿದೆ’ ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಪ್ರಿಯಾಂಕಾ ‘ಪಿಟಿಐ ವಿಡಿಯೋಸ್’ಗೆ ಪ್ರತಿಕ್ರಿಯಿಸಿದರು.
ಮಹೇಶ್ ಎಂಬ ಮತ್ತೊಬ್ಬರು ತಮ್ಮ ಪತ್ನಿಯು ಪೂರಿ ತಿಂದ ನಂತರ ನಿತ್ರಾಣಗೊಂಡಿದ್ದು, ಕ್ರಮೇಣ ಪ್ರಜ್ಞಾಹೀನ ಸ್ಥಿತಿ ತಲುಪಿದ್ದನ್ನು ಹೇಳಿಕೊಂಡರು.
ಸ್ಥಳೀಯ ಹಳ್ಳಿಯ ಅಂಗಡಿಯೊಂದರಿಂದ ಹಿಟ್ಟನ್ನು ತರಿಸಲಾಗಿತ್ತು ಎಂದೂ ಅವರು ತಿಳಿಸಿದರು.
ಫರಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಸ್ವಸ್ಥರಾದವರಿಗೆ ಮೊದಲು ಚಿಕಿತ್ಸೆ ನೀಡಲಾಯಿತು. ಕ್ರಮೇಣ ವಾಂತಿ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗತೊಡಗಿದ್ದೇ, ಬೃಂದಾವನದ ಆಸ್ಪತ್ರೆ ಹಾಗೂ ಆಗ್ರಾದ ಎಸ್.ಎನ್. ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಆರೋಗ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ತಂಡದ ಉಸ್ತುವಾರಿ ವಹಿಸಿಕೊಂಡಿರುವ ಡಾ. ಬುದ್ಧದೇವ ಪ್ರಸಾದ್ ಮಾಹಿತಿ ನೀಡಿದರು.
ಅಸ್ವಸ್ಥರಾದವರಲ್ಲಿ ಬಹುತೇಕರು ಫಖರಮ್, ಬರೋಡಾ, ಮಿರ್ಜಾಪುರ್‌ಗೆ ಹೊಂದಿಕೊಂಡ ಗ್ರಾಮದವರಾಗಿದ್ದಾರೆ. ಚಿಕಿತ್ಸೆಯ ನಂತರ ಎಲ್ಲರಲ್ಲೂ ಚೇತರಿಕೆ ಕಂಡುಬಂದಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಅಜಯ್ ಕುಮಾರ್ ವರ್ಮ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.