ADVERTISEMENT

ಮಥುರಾ | ನೀರಿನ ಟ್ಯಾಂಕ್ ಕುಸಿತ: ಮೂವರು ಅಧಿಕಾರಿಗಳ ಅಮಾನತು, ತನಿಖಾ ಸಮಿತಿ ರಚನೆ

ಪಿಟಿಐ
Published 2 ಜುಲೈ 2024, 6:46 IST
Last Updated 2 ಜುಲೈ 2024, 6:46 IST
<div class="paragraphs"><p>ಓವರ್‌ಹೆಡ್‌ ಟ್ಯಾಂಕ್‌ ಕುಸಿದಿರುವ ದೃಶ್ಯ</p></div>

ಓವರ್‌ಹೆಡ್‌ ಟ್ಯಾಂಕ್‌ ಕುಸಿದಿರುವ ದೃಶ್ಯ

   

ಪಿಟಿಐ ಚಿತ್ರ

ಮಥುರಾ: ಇಲ್ಲಿನ ಜನನಿಬಿಡ ಪ್ರದೇಶದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ಕುಸಿದು ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಉತ್ತರ ಪ್ರದೇಶ ಜಲ ನಿಗಮವು ಅಮಾನತುಗೊಳಿಸಿದೆ.

ADVERTISEMENT

ಘಟನೆ ಸಂಬಂಧ ತನಿಖೆ ನಡೆಸಲು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಹೇಳಿಕೆ ತಿಳಿಸಿದೆ.

ಭಾನುವಾರ ಸಂಜೆ ನಗರದ ಕೃಷ್ಣ ವಿಹಾರ್ ಕಾಲೋನಿಯಲ್ಲಿ ಓವರ್‌ಹೆಡ್ ಟ್ಯಾಂಕ್‌ ಕುಸಿದು ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದರು..

ಸಹಾಯಕ ಎಂಜಿನಿಯರ್‌ ಲಲಿತ್‌ ಮೋಹನ್‌, ಕಿರಿಯ ಎಂಜಿನಿಯರ್‌ ಬೀರೇಂದ್ರ ಪಾಲ್‌ ಮತ್ತು ರವೀಂದ್ರ ಪ್ರತಾಪ್‌ ಸಿಂಗ್‌ ಅಮಾನತುಗೊಂಡ ಅಧಿಕಾರಿಗಳು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಜಲ ನಿಗಮವು ಮೂರು ಸಂಸ್ಥೆಗಳು (ಎಂ/ಎಸ್‌ ಎಸ್‌ಎಂ ನಿರ್ಮಾಣ ಸಂಸ್ಥೆ, ಎಂ/ಎಸ್‌ ಬನ್ವಾರಿ ಮತ್ತು ಎಂ/ಎಸ್‌ ತ್ರಿಲೋಕ್‌ ಸಿಂಗ್‌ ರಾವತ್‌) ಹಾಗೂ ಹಲವು ಉದ್ಯೋಗಿಗಳ ವಿರುದ್ಧ ಮಥುರಾದ ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ನ್ಯೂನತೆಗಳ ತನಿಖೆ ನಡೆಸಲು ಗಾಜಿಯಾಬಾದ್‌ ಪ್ರದೇಶದ ಮುಖ್ಯ ಎಂಜಿನಿಯರ್‌ ಅಧ್ಯಕ್ಷತೆಯಲ್ಲಿ ವಿಚಾರಣಾ ಸಮಿತಿ ರಚಿಸಲಾಗಿದೆ. ಐಐಟಿ ದೆಹಲಿ ಅಥವಾ ಐಐಟಿ ಕಾನ್ಪುರದಂತಹ ಸಂಸ್ಥೆಗಳಿಂದ ಸಮಿತಿಯು ತನಿಖೆ ನಡೆಸಲು ಸಹಾಯವನ್ನು ಪಡೆಯಲಿದೆ ಎಂದು ಪ್ರಕಟಣೆ ಹೇಳಿದೆ.

ಪ್ರಕರಣ ಕುರಿತು ತನಿಖೆ ನಡೆಸಲು ಮಥುರಾ ಜಿಲ್ಲಾಡಳಿತವು ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದ್ದು. ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಸಮಿತಿಯು ವರದಿ ಸಲ್ಲಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

2021ರಲ್ಲಿ ಗಂಗಾಜಲ ಕುಡಿಯುವ ನೀರಿನ ಯೋಜನೆಯಡಿ ₹6 ಕೋಟಿ ವೆಚ್ಚದಲ್ಲಿ ಈ ಟ್ಯಾಂಕ್‌ ಅನ್ನು ನಿರ್ಮಿಸಲಾಗಿತ್ತು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಮತ್ತು ಸಮೀಪದ ಮನೆಗಳಿಗೆ ಆಗಿರುವ ಹಾನಿಯ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.