ಲಖನೌ: ‘ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕೆಲವೊಂದು ಹೊಸ ವಿಷಯಗಳು ಬೆಳಕಿಗೆ ಬಂದಿವೆ. ಇದು ಉತ್ತರ ಪ್ರದೇಶ ಸರ್ಕಾರದ ಕಾರ್ಯವೈಖರಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಯಾವತಿ ಅವರು ಸೋಮವಾರ ವಾಗ್ದಾಳಿ ನಡೆಸಿದರು.
ಮಾರ್ಚ್ 5 ರಂದು ವಿಶೇಷ ನ್ಯಾಯಾಧೀಶರು ನಡೆಸಿದ ವಿಚಾರಣೆ ವೇಳೆ ಸಂತ್ರಸ್ತೆಯ ಪರ ವಕೀಲರು ಮತ್ತು ಸಾಕ್ಷಿಗಳಿಗೆ ಬೆದರಿಕೆಯೊಡ್ಡಲಾಗಿತ್ತು ಎಂದು ಸಂತ್ರಸ್ತೆಯ ಅಣ್ಣ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ತನಿಖೆ ನಡೆಸುವಂತೆ ಹಾಥರಸ್ ಜಿಲ್ಲಾ ನ್ಯಾಯಾಧೀಶರು ಮತ್ತು ಸಿಆರ್‌ಪಿಎಫ್‌ನ ಇನ್‌ಸ್ಪೆಕ್ಟರ್ ಜನರಲ್‌ಗೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಮಾಯಾವತಿ,‘ನ್ಯಾಯ ಪಡೆಯಲು ಹಾಥರಸ್ ಸಂತ್ರಸ್ತೆಯ ಕುಟುಂಬ ಪಡುತ್ತಿರುವ ಕಷ್ಟದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿರುವ ಹೊಸ ವಿಷಯಗಳು ಉತ್ತರ ಪ್ರದೇಶ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಗಂಭೀರ ಸ್ವರೂಪದ ಪ್ರಶ್ನೆಗಳು ಎದ್ದಿವೆ’ ಎಂದಿದ್ದಾರೆ.
‘ಅಲಹಾಬಾದ್ ಹೈಕೋರ್ಟ್‌ನ ಈ ನಿರ್ದೇಶನವು ಉತ್ತರ ಪ್ರದೇಶ ಸರ್ಕಾರದ ನೆಮ್ಮದಿಯನ್ನು ಹಾಳುಮಾಡಿದೆ. ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಆಳುತ್ತಾರೆ. ಇಲ್ಲಿ ನ್ಯಾಯ ಸಿಗುವುದು ಕಷ್ಟ ಎಂಬ ಗ್ರಹಿಕೆ ಜನಸಾಮಾನ್ಯರಲ್ಲಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.