ಲಖನೌ:ತಮ್ಮ ಮತ್ತು ತಮ್ಮ ಪಕ್ಷದ ಚಿಹ್ನೆಯ ಪ್ರತಿಮೆಗಳ ನಿರ್ಮಾಣಕ್ಕೆ ಮಾಡಿರುವ ವೆಚ್ಚವನ್ನು ಸರ್ಕಾರದ ಬೊಕ್ಕಸಕ್ಕೆ ಮರಳಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ತಿರುಚಬೇಡಿ ಎಂದು ಬಿಜೆಪಿ ನಾಯಕರಿಗೆ ಮತ್ತು ಮಾಧ್ಯಮಗಳಿಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
‘ಈ ಪ್ರಕರಣದಲ್ಲಿ ನ್ಯಾಯ ಸಿಕ್ಕೇಸಿಗುತ್ತದೆ. ಅಲ್ಲಿಯವರೆಗೂ ಊಹಾಪೋಹಗಳನ್ನು ಹರಡುವುದನ್ನು ಬಿಜೆಪಿ ನಾಯಕರು ಮತ್ತು ಮಾಧ್ಯಮಗಳು ನಿಲ್ಲಿಸಬೇಕು’ ಎಂದು ಮಾಯಾವತಿ ಶನಿವಾರ ಟ್ವೀಟ್ ಮಾಡಿದ್ದಾರೆ.
ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಹಲವೆಡೆ ತಮ್ಮ ಪ್ರತಿಮೆ ಮತ್ತು ಪಕ್ಷದ ಚಿಹ್ನೆಯ (ಆನೆ) ಸ್ಮಾರಕಗಳನ್ನು ನಿರ್ಮಿಸಿದ್ದರು. ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು.
ರಾಜಕೀಯ ಪಕ್ಷವೊಂದರ ಚಿಹ್ನೆಗಳ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಹಣ ಬಳಸುವುದು ಸರಿಯಲ್ಲ. ಈ ಸ್ಮಾರಕಗಳ ನಿರ್ಮಾಣಕ್ಕೆ ತಗುಲಿದ ವೆಚ್ಚವನ್ನು ಮಾಯಾವತಿ ಅವರು ಖಜಾನೆಗೆ ವಾಪಸ್ ಮಾಡಬೇಕಾಗಬಹುದು. ಆದರೆ ಈ ವಿಚಾರದಲ್ಲಿ ಮತ್ತಷ್ಟು ವಿಚಾರಣೆಯ ಅಗತ್ಯವಿದೆ ಎಂದು ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೇಳಿತ್ತು. ಅರ್ಜಿಯ ಮುಂದಿನ ವಿಚಾರಣೆ ಏಪ್ರಿಲ್ 2ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.