ಲಖನೌ:ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಡುವಣ ಮೈತ್ರಿ ಕೊನೆಯಾಗಲಿದೆಯೇ? ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಬಿಎಸ್‌ಪಿ ನಿರ್ಧರಿಸಿರುವ ಬಗ್ಗೆ ಪಕ್ಷದ ವರಿಷ್ಠೆ ಮಾಯಾವತಿ ಸುಳಿವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
11 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಾಗುವುದು ಎಂದು ಅವರು ಪಕ್ಷದ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಸುದೀರ್ಘ ವರ್ಷಗಳ ಬಳಿಕ ಮತ್ತೆ ಮೈತ್ರಿ ಮಾಡಿಕೊಂಡಿದ್ದ ಉಭಯ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಒಟ್ಟಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆದರೆ ಈ ಮೈತ್ರಿಗೆ ನಿರೀಕ್ಷಿತ ಯಶಸ್ಸು ದೊರೆತಿರಲಿಲ್ಲ.
ಮೂಲಗಳ ಪ್ರಕಾರ, ‘ಈ ಮೈತ್ರಿಯಿಂದ ಪ್ರಯೋಜನವಿಲ್ಲ. ಯಾದವ ಸಮುದಾಯದ ಮತ ನಮಗೆ ದೊರೆಯಲಿಲ್ಲ. ಅಖಿಲೇಶ್ ಯಾದವ್ (ಎಸ್‌ಪಿ ನಾಯಕ) ಮತ್ತು ಅವರ ಕುಟುಂಬದವರಿಗೂ ಯಾದವರ ಮತಗಳು ದೊರೆಯಲಿಲ್ಲ’ ಎಂದು ಮಾಯಾವತಿ ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಫಿರೋಜಾಬಾದ್‌ನಲ್ಲಿ ತಮ್ಮದೇ ಪ್ರತ್ಯೇಕ ಪಕ್ಷದ ಮೂಲಕ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್ ಸಹ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಇದು ಯಾದವ್ ಮತಗಳನ್ನು ವಿಭಜಿಸಿದೆ ಎಂದು ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
11 ವಿಧಾನಸಭಾ ಕ್ಷೇತ್ರಗಳ ಶಾಸಕರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರಿಂದ ಉಪ ಚುನಾವಣೆ ನಡೆಸಲಾಗುತ್ತಿದೆ. ಈ ಪೈಕಿ 9 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 2 ಕ್ಷೇತ್ರಗಳಲ್ಲಿ ಬಿಎಸ್‌ಪಿ ಜಯ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.