ನವದೆಹಲಿ: ಉತ್ತರ ಪ್ರದೇಶದಲ್ಲಿ ತನ್ನ ಪ್ರತಿಮೆಗಳ ನಿರ್ಮಾಣವನ್ನು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರ ಅಫಿಡವಿಟ್ ಸಲ್ಲಿಸಿರುವ ಅವರು, ‘ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಲಖನೌ ಮತ್ತು ನೋಯ್ಡಾದಲ್ಲಿ ನಿರ್ಮಿಸಲಾಗಿರುವ ನನ್ನ ಹಾಗೂ ಪಕ್ಷದ ಇತರೆ ನಾಯಕರ ಪ್ರತಿಮೆಗಳನ್ನು ನಿರ್ಮಿಸುವುದರ ಉದ್ದೇಶ ಸಂತರು, ಗುರುಗಳು ಹಾಗೂ ಸಮಾಜ ಸುಧಾರಕರ ಮೌಲ್ಯಗಳನ್ನು ಪ್ರಚಾರ ಮಾಡುವುದಾಗಿದೆ. ಜತೆಗೆ ಬಿಎಸ್‌ಪಿ ಚಿಹ್ನೆಯಾದ ಆನೆಗಳ ಪ್ರತಿಮೆ ನಿರ್ಮಿಸಿರುವುದು, ಪಕ್ಷವನ್ನು ವೈಭವೀಕರಿಸುವ ಉದ್ದೇಶದಿಂದ
ಅಲ್ಲ’ ಎಂದು ಹೇಳಿದ್ದಾರೆ.
‘ಜನರ ಇಚ್ಛೆಯಂತೆ ನನ್ನ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಸ್ಮಾರಕಗಳು ಮತ್ತು ಪ್ರತಿಮೆಗಳ ನಿರ್ಮಾಣಕ್ಕೆ ವಿಧಾನಸಭೆಯಲ್ಲಿ ಅನುಮತಿ ಪಡೆದ ಬಳಿಕ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಲಾಗಿತ್ತು’ ಎಂದು ಅವರು ಹೇಳಿದ್ದಾರೆ.
‘ಸ್ಮಾರಕ, ಪ್ರತಿಮೆಗಳ ನಿರ್ಮಾಣಕ್ಕೆಸಾರ್ವಜನಿಕ ಹಣ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ರಾಜಕೀಯ ಪ್ರೇರಿತವಾದದ್ದು. ಈ ಅರ್ಜಿ ವಜಾಗೊಳಿಸಬೇಕು’ ಎಂದು ಮಾಯಾವತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
2008–10ರ ಅವಧಿಯಲ್ಲಿ ಮಾಯಾವತಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ, ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಮೆಗಳನ್ನು ನಿರ್ಮಿಸಲು ಬಜೆಟ್‌ನಿಂದ ₹2,000 ಕೋಟಿ ಬಳಸಲಾಗಿದೆ ಎಂದು ಆರೋಪಿಸಿ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸ್ಮಾರಕಗಳಿಂದ ಆದಾಯ’
‘ಎಲ್ಲಾ ಸ್ಮಾರಕಗಳನ್ನು ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ನಿತ್ಯವೂ ಭೇಟಿ ನೀಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಬರುತ್ತಿದೆ’ ಎಂದು ಮಾಯಾವತಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸುತ್ತೋಲೆ ರದ್ದುಪಡಿಸಿದ ‘ಸುಪ್ರೀಂ’
ವಸೂಲಾಗದ ಸಾಲಗಳ ಮರುಪಾವತಿ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಫೆ.12 ರಂದು ಹೊರಡಿಸಿದ್ದ ಸುತ್ತೋಲೆ ರದ್ದುಪಡಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದೆ. ವಿದ್ಯುತ್ ಕಂಪನಿಗಳು ಮತ್ತು ಸಾಲಗಾರರಿಗೆ ಈ ಆದೇಶ ನಿರಾಳತೆ ನೀಡಲಿದೆ. ಸಾಲ ಮರು ಹೊಂದಾಣಿಕೆ ಪ್ರಕ್ರಿಯೆ ಸಹ ಸರಾಗವಾಗಲಿದೆ.ಆದರೆ ಇದರಿಂದಾಗಿದಿವಾಳಿತನ ಘೋಷಣೆ ಪ್ರಕ್ರಿಯೆ ನಿಧಾನವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಸುಪ್ರೀಂ ಕೋರ್ಟ್ ಈಗ ನೀಡಿರುವ ಆದೇಶದಿಂದಾಗಿ, ವಸೂಲಾಗದ ಸಾಲಗಳ ಮರು ಹೊಂದಾಣಿಕೆ ಕುರಿತು ಆರ್‌ಬಿಐ ಪರಿಷ್ಕೃತ ನಿಯಮಾವಳಿಗಳನ್ನು ಹೊರಡಿಸಬೇಕಾಗುತ್ತದೆ. ಈಗಾಗಲೇ ದಿವಾಳಿತನ ಘೋಷಣೆ ಪ್ರಕ್ರಿಯೆ ಪೂರ್ಣವಾಗಿದ್ದರೆ ಅಥವಾ ಪೂರ್ಣವಾಗುವ ಹಂತದಲ್ಲಿದ್ದರೆ ಅಂತಹ ಪ್ರಕರಣಗಳ ಸ್ಥಿತಿ ಏನು ಎನ್ನುವ ಪ್ರಶ್ನೆಯೂ ಎದುರಾಗುತ್ತದೆ’ ಎಂದು ಜೆ ಸಾಗರ್ ಅಸೋಸಿಯೇಟ್ಸ್‌ನ ಪಾಲುದಾರ ವಿಶ್ರೋವ್ ಮುಖರ್ಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.