ಗೋರಖ್‌ಪುರ (ಉತ್ತರ ಪ್ರದೇಶ): ಬಿಜೆಪಿ ಮತ್ತು ಕಾಂಗ್ರೆಸ್‌ನ ತಪ್ಪು ನೀತಿಗಳಿಂದಾಗಿ ಆ ಪಕ್ಷಗಳನ್ನು ಜನರು ಕೈಬಿಟ್ಟಿದ್ದಾರೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಶನಿವಾರ ಹೇಳಿದರು.
ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಜಾತಿವಾದಿ, ಬಂಡವಾಳಶಾಹಿ ನೀತಿಗಳಿಂದಾಗಿ ಈ ಬಾರಿ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೇರದು ಎಂದರು.
‘ಹಿಂದುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಉತ್ತುಂಗಕ್ಕೇರಿವೆ. ಮೇಲ್ವರ್ಗದಲ್ಲಿರುವ ಬಡವರ ಸ್ಥಿತಿಯೂ ಉತ್ತಮವಾಗಿಲ್ಲ. ರಾಜ್ಯದಲ್ಲಿ ಬ್ರಾಹ್ಮಣರಿಗೂ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.
‘ಬಿಜೆಪಿ ಸರ್ಕಾರದ ತಪ್ಪು ನೀತಿಗಳು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿವೆ. ಬಡತನ, ನಿರುದ್ಯೋಗ ಮತ್ತು ಹಣದುಬ್ಬರ ಏರಿಕೆಯಾಗುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆಯಾಗಿಲ್ಲ’ ಎಂದು ಟೀಕಿಸಿದರು.
‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರ ಕಿಸೆಯ ಹಣದಿಂದ ಜನರಿಗೆ ಉಚಿತ ಪಡಿತರ ವಿತರಿಸುತ್ತಿಲ್ಲ. ಅದನ್ನು ಅವರ ತೆರಿಗೆ ಹಣದಿಂದ ನೀಡಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.