ADVERTISEMENT

ಕಾಂಗ್ರೆಸ್‌, ಬಿಜೆಪಿಗೆ ಮತ ಹಾಕಬೇಡಿ: ದಲಿತರಿಗೆ ಮಾಯಾವತಿ ಮನವಿ

ಪಿಟಿಐ
Published 29 ಸೆಪ್ಟೆಂಬರ್ 2024, 10:38 IST
Last Updated 29 ಸೆಪ್ಟೆಂಬರ್ 2024, 10:38 IST
ಮಾಯಾವತಿ
ಮಾಯಾವತಿ   

ಲಖನೌ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತ ಚಲಾಯಿಸದಂತೆ ದಲಿತ ಸಮುದಾಯದವರನ್ನು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಮನವಿ ಮಾಡಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಕಾಂಗ್ರೆಸ್‌ ದಲಿತರನ್ನು ನಿರಂತರವಾಗಿ ಕಡೆಗಣಿಸಿದೆ ಹಾಗೂ ಮೀಸಲಾತಿ ಸಂಬಂಧ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

ದಲಿತ ಸಮುದಾಯದವರು ಸರ್ವಾನುಮತದಿಂದ ಬಿಎಸ್‌ಪಿಗೆ ಮತ ನೀಡಬೇಕು. ಏಕೆಂದರೆ ಈ ಸಮುದಾಯದ ಹಿತಾಸಕ್ತಿ ಮತ್ತು ಕಲ್ಯಾಣವನ್ನು ರಕ್ಷಿಸುವ ಬದ್ಧತೆಯನ್ನು ಬಿಎಸ್‌ಪಿ ಹೊಂದಿದೆ. ಸಾಂವಿಧಾನಿಕ ಹಕ್ಕುಗಳನ್ನು ನೀಡುವ ಮೂಲಕ ಅವರನ್ನು ಆಳುವ ವರ್ಗವನ್ನಾಗಿ ಮಾಡಲು ನಿರಂತರವಾಗಿ ಪಕ್ಷ ಶ್ರಮಿಸಲಿದೆ ಎಂದು ಮಾಯಾವತಿ ಭರವಸೆ ನೀಡಿದ್ದಾರೆ.

ADVERTISEMENT

ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ ಮೂರನೇ ಹಂತದ ಚುನಾವಣೆಯಲ್ಲಿ ‘ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಸುಳ್ಳು ಭರವಸೆಗಳಿಗೆ ಕಿವಿಕೊಡಬಾರದು, ಯಾವುದೇ ಆಮಿಷಗಳಿಗೆ ಒಳಗಾಗಬಾರದು ಹಾಗೂ ಆ ಪಕ್ಷಗಳ ಸಿದ್ಧಾಂತಗಳನ್ನು, ದಲಿತ ವಿರೋಧಿ ಇತಿಹಾಸವನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಮಾಯಾವತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.