ತ್ರಿಶೂರ್: ಕೇರಳದ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಒಬ್ಬರು ಪೊಲೀಸ್ ಇಲಾಖೆ ಎದುರು ವಿಶಿಷ್ಟ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಪೊಲೀಸ್ ಸಿಬ್ಬಂದಿ ತಮಗೆ ಸೆಲ್ಯೂಟ್ ಹೊಡೆದು ಗೌರವ ತೋರಬೇಕು ಎಂದು ಅವರು ಕೋರಿಕೆ ಸಲ್ಲಿಸಿದ್ದಾರೆ.
‘ನಮಸ್ಕರಿಸುವ ಮೂಲಕ ಪೊಲೀಸ್ ಸಿಬ್ಬಂದಿ ಮೇಯರ್ ಸ್ಥಾನಕ್ಕೆ ಗೌರವ ಸೂಚಿಸಬೇಕು,‘ ಎಂದು ಆದೇಶ ಹೊರಡಿಸುವಂತೆ ಒತ್ತಾಯಿಸಿ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರಿಗೆ ಪತ್ರ ಬರೆದಿದ್ದೇನೆ,‘ ಎಂದು ತ್ರಿಶೂರ್ ಮೇಯರ್ ಎಂ. ಕೆ. ವರ್ಗೀಸ್ ಶುಕ್ರವಾರ ಹೇಳಿದ್ದಾರೆ.
ಶಿಷ್ಟಾಚಾರದ ಪ್ರಕಾರ, ಕಾರ್ಪೊರೇಷನ್ ಮಿತಿಯಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯ ನಂತರದ ಸ್ಥಾನ ಮೇಯರ್‌ಗೆ ಇರಲಿದೆ ಎಂದು ಡಿಜಿಪಿಗೆ ಬರೆದ ಪತ್ರದಲ್ಲಿ ವರ್ಗೀಸ್ ಉಲ್ಲೇಖಿಸಿದ್ದಾರೆ.
‘ದುರದೃಷ್ಟವಶಾತ್, ಯಾರೂ ಮೇಯರ್‌ಗಳಿಗೆ ಗೌರವ ತೋರಿಸುತ್ತಿಲ್ಲ. ಅಧಿಕಾರದಲ್ಲಿರುವ ಇತರರನ್ನು ಗೌರವಿಸಲಾಗುತ್ತದೆ. ಮೇಯರ್‌ಗಳ ಉಪಸ್ಥಿತಿಯನ್ನು ಹೆಚ್ಚಿನ ಸಂದರ್ಭಗಳಲ್ಲಿ ನಿರ್ಲಕ್ಷಿಸಲಾಗುತ್ತದೆ‘ ಎಂದು ಸುದ್ದಿವಾಹಿನಿ ಜೊತೆ ಮಾತನಾಡುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.
ಕೋವಿಡ್ ತಡೆ ಕಾರ್ಯಕ್ರಮಗಳ ಭಾಗವಾಗಿ ವಿವಿಧ ಸ್ಥಳಗಳಿಗೆ ತೆರಳಿದಾಗ ಪೊಲೀಸರಿಂದ ನಿರ್ಲಕ್ಷಿಸಲ್ಪಟ್ಟಿದ್ದೇನೆ. ಅನೇಕ ಸಂದರ್ಭಗಳಲ್ಲಿ ಅವಮಾನಿಸಲಾಗಿದೆ ಎಂದು ಅವರು ಹೇಳಿದರು. ಮೇಯರ್‌ಗಳಿಗೆ ಗೌರವ ವಂದನೆ ಸಲ್ಲಿಸುವಂತೆ ಡಿಜಿಪಿ ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸಬೇಕು. ನನ್ನ ಈ ಬೇಡಿಕೆ ಕೇವಲ ನನಗಾಗಿ ಮಾತ್ರವಲ್ಲ ಎಲ್ಲ ಮೇಯರ್‌ಗಳಿಗಾಗಿ ಎಂದು ಅವರು ಹೇಳಿಕೊಂಡಿದ್ದಾರೆ.
ವರ್ಗೀಸ್ ಅವರ ಕೋರಿಕೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿಪಿ ರೇಂಜ್ ಡಿಐಜಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿಯಮಗಳ ಪ್ರಕಾರ, ಕಾರ್ಪೊರೇಷನ್‌ನ ಮಿತಿಯೊಳಗೆ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಮೇಯರ್‌ಗೆ ವಂದನೆ ಸಲ್ಲಿಸಬೇಕು ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.