ADVERTISEMENT

#MeToo: ಅಮಿತಾಬ್‌ ಬಚ್ಚನ್ ಸಹ ಬೆಲೆ ತೆರಬೇಕಾಗಲಿದೆ ಎಂದ ಸಪ್ನಾ ಭವಾನಿ

ಏಜೆನ್ಸೀಸ್
Published 13 ಅಕ್ಟೋಬರ್ 2018, 9:15 IST
Last Updated 13 ಅಕ್ಟೋಬರ್ 2018, 9:15 IST
   

ಮುಂಬೈ: ಲೈಂಗಿಕ ಕಿರುಕುಳ, ದೌರ್ಜನ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡಿರುವ #MeToo ಅಭಿಯಾನದ ಬಿಸಿ ಬಾಲಿವುಡ್‌ ಬಿಗ್‌ಬಿ ಅಮಿತಾಬ್ ಬಚ್ಚನ್ ಅವರಿಗೂ ತಟ್ಟಲಿದೆಯೇ? ಕೇಶ ವಿನ್ಯಾಸಕಿ ಸಪ್ನಾ ಭವಾನಿ ಮಾಡಿರುವ ಟ್ವೀಟ್ ಈ ಅನುಮಾನ ಹುಟ್ಟುಹಾಕಿದೆ.

ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಾದ ಅಲೋಕ್ ನಾಥ್, ನಾನಾ ಪಾಟೇಕರ್, ಸಾಜಿದ್ ಖಾನ್, ಕೈಲಾಸ್ ಖೇರ್, ಅದಿತಿ ಮಿತ್ತಲ್, ಲಸಿತ್ ಮಾಲಿಂಗ ವಿರುದ್ಧ ಈಗಾಗಲೇ ಲೈಂಗಿಕ ಕಿರುಕುಳದ ಆರೋಪ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಅವರು #MeToo ಅಭಿಯಾನ ಬೆಂಬಲಿಸಿ ಸ್ತ್ರೀಯರ ಪರ ಹೇಳಿಕೆ ನೀಡಿದ್ದರು. ಇದನ್ನು ಟ್ವೀಟ್ ಸಹ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಸಪ್ನಾ ಭವಾನಿ, ನಿಮ್ಮ ಸಾಮಾಜಿಕ ಕಳಕಳಿಯ ಮುಖವಾಡ ಶೀಘ್ರ ಕಳಚಲಿದೆ ಎಂದು ಉಲ್ಲೇಖಿಸಿದ್ದಾರೆ.

‘ಇದೊಂದು (#MeToo ಬಗ್ಗೆ ಅಮಿತಾಬ್ ಮಾಡಿರುವ ಟ್ವೀಟ್) ಅತಿ ದೊಡ್ಡ ಸುಳ್ಳು. ಸರ್, ಪಿಂಕ್ ಸಿನಿಮಾ ಬಿಡುಗಡೆಯಾಗಿ ಹಾಗೆಯೇ ಹೋಯ್ತು. ಸಾಮಾಜಿಕ ಕಳಕಳಿಯ ಹೋರಾಟಗಾರರಾಗಿ ನಿಮ್ಮ ಮುಖವಾಡವೂ ಬಯಲಾಗಲಿದೆ. ನಿಮ್ಮ ಸತ್ಯ ಶೀಘ್ರ ಹೊರಬರಲಿದೆ. ನೀವು ನಿಮ್ಮ ಉಗುರು ಕಚ್ಚುತ್ತಾ ಇರಬಹುದು, ಆದರೆ ಅದು ಸಾಕಾಗಲಾರದು ಎಂದು ಭಾವಿಸುತ್ತೇನೆ.@SrBachchan #Metoo #MeTooIndia #comeoutwomen’ ಎಂದು ಸಪ್ನಾ ಟ್ವೀಟ್ ಮಾಡಿದ್ದಾರೆ.

ADVERTISEMENT

ಇದಕ್ಕೂ ಮುನ್ನ ಮಾಡಿದ್ದ ಮತ್ತೊಂದು ಟ್ವೀಟ್‌ನಲ್ಲಿ, ‘ಬಚ್ಚನ್ ಅವರು ಅನುಚಿತ ವರ್ತನೆ ತೋರಿದ್ದ ಬಗ್ಗೆ ಅನೇಕ ಕತೆಗಳನ್ನು ಕೇಳಿದ್ದೇನೆ. ಆ ಮಹಿಳೆಯರು ಸತ್ಯ ಬಹಿರಂಗಪಡಿಸಲಿ ಎಂದು ಆಶಿಸುತ್ತೇನೆ’ ಎಂದು ಉಲ್ಲೇಖಿಸಿದ್ದಾರೆ.

ಗುರುವಾರ ತಮ್ಮ (ಅಕ್ಟೋಬರ್ 11) ಜನ್ಮದಿನದ ಸಂದರ್ಭ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಅಮಿತಾಬ್, ‘ಯಾವ ಮಹಿಳೆಯನ್ನೂ ಅದರಲ್ಲೂ ಕೆಲಸದ ಸ್ಥಳದಲ್ಲಿ ದುರುಪಯೋಗಕ್ಕೆ ಅಥವಾ ಅಕ್ರಮ ವರ್ತನೆಗೆ ಒಳಪಡಿಸಬಾರದು. ಅಂತಹ ಘಟನೆ ನಡೆದಲ್ಲಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಅದು ದೂರು ನೀಡುವ ಮೂಲಕ ಅಥವಾ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಆಗಿರಬಹುದು’ ಎಂದು ಹೇಳಿದ್ದರು. ಜತೆಗೆ #MeToo ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.