ನವದೆಹಲಿ: ಆಂತರಿಕ ವಿಷಯಗಳ ಬಗ್ಗೆ ಹೊರಗಿನವರು ನೀಡುವ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಕರ್ನಾಟಕದ ಹಿಜಾಬ್ ವಿವಾದ ಮತ್ತು ವಸ್ತ್ರಸಂಹಿತೆ ವಿಚಾರವಾಗಿ ಕೆಲವು ದೇಶಗಳು ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.
ಹಿಜಾಬ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ, ‘ಇದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯವಲ್ಲ. ನಾವು ನೇರವಾಗಿ ಪ್ರತಿಕ್ರಿಯೆ ನೀಡಲಾಗದು. ಆದರೆ, ಇದು ಭಾರತದ ಆಂತರಿಕ ವಿಚಾರ ಎಂದು ನಾವು ಈಗಾಗಲೇ ಹೇಳಿರುವುದನ್ನು ನೀವು ಗಮನಿಸಿರಬಹುದು. ಈ ವಿಚಾರವಾಗಿ ಹೊರಗಿನವರು, ಇತರ ದೇಶಗಳು ನೀಡುವ ಪ್ರತಿಕ್ರಿಯೆಗಳನ್ನು ಒಪ್ಪಲಾಗದು’ ಎಂದು ಹೇಳಿದ್ದಾರೆ.
ಇಂಥ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಭಾರತಕ್ಕೆ ತನ್ನದೇ ಆದ ವ್ಯವಸ್ಥೆಯಿದೆ. ಭಾರತವು ಸಾಂವಿಧಾನಿಕ ಚೌಕಟ್ಟು, ನ್ಯಾಯಾಂಗ ವ್ಯವಸ್ಥೆ, ಪ್ರಜಾಸತ್ತಾತ್ಮಕ ತತ್ವಗಳನ್ನು ಒಳಗೊಂಡಿದೆ. ಸದ್ಯ ಹಿಜಾಬ್ ಪ್ರಕರಣ ನ್ಯಾಯಾಂಗದ ವ್ಯಾಪ್ತಿಯಲ್ಲಿದೆ. ಕರ್ನಾಟಕ ಹೈಕೋರ್ಟ್ ಆ ಕುರಿತು ವಿಚಾರಣೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಹಿಜಾಬ್ ವಿಚಾರವಾಗಿ ಕೆಲವು ದೇಶಗಳು ನೀಡಿದ್ದ ಹೇಳಿಕೆಗಳನ್ನು ಕಳೆದ ವಾರವೂ ಭಾರತ ತಿರಸ್ಕರಿಸಿತ್ತು.
ಈ ಮಧ್ಯೆ, ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶಕ್ಕೆ ಒತ್ತಾಯಿಸಿಕರ್ನಾಟಕದ ಹಲವೆಡೆ ಗುರುವಾರವೂ ಪ್ರತಿಭಟನೆ ಮುಂದುವರಿದಿತ್ತು.ಕೆಲವು ಪದವಿಪೂರ್ವ ಕಾಲೇಜು, ಪ್ರೌಢಶಾಲೆಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ವಾಪಸಾಗಿದ್ದಾರೆ. ಕೆಲವೆಡೆ ವಿದ್ಯಾರ್ಥಿನಿಯರುಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.