ADVERTISEMENT

ಪಾಸ್‌ಪೋರ್ಟ್ ರದ್ದು: ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪ್ರಜ್ವಲ್‌ಗೆ ನೋಟಿಸ್‌

ಪಿಟಿಐ
Published 24 ಮೇ 2024, 16:03 IST
Last Updated 24 ಮೇ 2024, 16:03 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ನವದೆಹಲಿ: ‘ರಾಜತಾಂತ್ರಿಕ ಪಾಸ್‌ಪೋರ್ಟ್‌ಅನ್ನು ಏಕೆ ರದ್ದುಗೊಳಿಸಬಾರದು’ ಎಂದು ಕೇಳಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಲೈಂಗಿಕ ದೌರ್ಜನ್ಯದ ಆರೋಪಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ ಕೋರಿಕೆಯನ್ನು ಆಧರಿಸಿ ಪಾಸ್‌ಪೋರ್ಟ್‌ ಏಕೆ ರದ್ದುಮಾಡಬಾರದು ಎಂದು ಅದು ನೋಟಿಸ್ ಮೂಲಕ ಕೇಳಿದೆ. ಪ್ರಜ್ವಲ್ ಅವರು ಹೊಂದಿರುವ ರಾಜತಾಂತ್ರಿಕ ವೀಸಾ ರದ್ದುಪಡಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ಗುರುವಾರ ತಿಳಿಸಿದ್ದವು. ಪ್ರಜ್ವಲ್ ಅವರು ಈಗ ಜರ್ಮನಿಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಪ್ರಜ್ವಲ್ ಅವರ ಪಾಸ್‌ಪೋರ್ಟ್ ರದ್ದುಪಡಿಸಲು ಆರಂಭಿಸಿರುವ ಪ್ರಕ್ರಿಯೆಯ ಭಾಗವಾಗಿ ಈ ನೋಟಿಸ್ ನೀಡಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಇ–ಮೇಲ್ ಮೂಲಕ ನೋಟಿಸ್ ರವಾನಿಸಲಾಗಿದೆ ಎಂದು ಗೊತ್ತಾಗಿದೆ.

ADVERTISEMENT

ಪಾಸ್‌ಪೋರ್ಟ್‌ ರದ್ದಾದರೆ ಪ್ರಜ್ವಲ್ ಅವರು ವಿದೇಶದಲ್ಲಿ ಇರುವುದು ಅಕ್ರಮವಾಗುತ್ತದೆ. ಅವರು ಇರುವ ದೇಶದ ಅಧಿಕಾರಿಗಳು ಕಾನೂನಿನ ಕ್ರಮಕ್ಕೆ ಮುಂದಾಗಬಹುದು ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.