ADVERTISEMENT

NEET ಅಂಕಗಳ ಹೆಚ್ಚಳ | ಮರುಪರೀಕ್ಷೆಗೆ ಆಕಾಂಕ್ಷಿಗಳ ಆಗ್ರಹ: ಆರೋಪ ನಿರಾಕರಿಸಿದ NTA

ಪಿಟಿಐ
Published 6 ಜೂನ್ 2024, 13:50 IST
Last Updated 6 ಜೂನ್ 2024, 13:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳಿಗೆ ಸೇರಲು ನಡೆಸುವ ನೀಟ್‌ ಪರೀಕ್ಷೆಯಲ್ಲಿ ಹೆಚ್ಚುವರಿಿ ಅಂಕಗಳನ್ನು ನೀಡಲಾಗಿದೆ ಎಂದು ಬಹಳಷ್ಟು ಆಕಾಂಕ್ಷಿಗಳು ಆರೋಪಿಸಿದ್ದು, ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ. 

ಈ ಬಾರಿ ಅನಗತ್ಯವಾಗಿ ಹೆಚ್ಚುವರಿಿ ಅಂಕಗಳನ್ನು ನೀಡಿರುವ ಪರಿಣಾಮ 67 ಅಭ್ಯರ್ಥಿಗಳು ಮೊದಲ ರ‍್ಯಾಂಕ್ ಪಡೆದಿದ್ದಾರೆ. ಹರಿಯಾಣದ ಒಂದೇ ಕೇಂದ್ರದ ಆರು ವಿದ್ಯಾರ್ಥಿಗಳು ಈ ಸಾಧನೆ ಮಾಡಿರುವುದೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದೆ.

ADVERTISEMENT

ಆದರೆ ಈ ಆರೋಪವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಲ್ಲಗಳೆದಿದೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ಆದ ಬದಲಾವಣೆ ಮತ್ತು ಕೆಲ ಕಾರಣಗಳಿಂದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಉಂಟಾದ ಗೊಂದಲದಿಂದಾಗಿ ನೀಡಿದ ಹೆಚ್ಚುವರಿ ಸಮಯಾವಕಾಶ ಈ ಬಾರಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿರುವುದಕ್ಕೆ ಕಾರಣ ಎಂದು ಹೇಳಿದೆ.

‘ನೀಟ್ ಪರೀಕ್ಷೆ ನಂತರ, ನೀಟ್ ಫಲಿತಾಂಶವೂ ಈಗ ವಿವಾದದಿಂದ ಕೂಡಿದೆ. ಒಂದೇ ಪರೀಕ್ಷಾ ಕೇಂದ್ರದ ಆರು ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದಿರುವುದರ ಕುರಿತು ಈಗ ಹಲವು ಪ್ರಶ್ನೆಗಳು ಎದ್ದಿವೆ. ಇದರೊಂದಿಗೆ ನೀಟ್ ಪರೀಕ್ಷೆ ಕುರಿತು ಹಲವು ಅಕ್ರಮಗಳು ಈಗ ಬೆಳಕಿಗೆ ಬಂದಿವೆ’ ಎಂದು ಕಾಂಗ್ರೆಸ್ ಪಕ್ಷವು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

‘ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಈಗ ಫಲಿತಾಂಶ ಏರುಪೇರು. ದೇಶದ ಲಕ್ಷಾಂತರ ಯುವಜನತೆಯ ಭವಿಷ್ಯ ಹಾಳು. ಈ ಸರ್ಕಾರ ಯಾವುದೇ ಸೋರಿಕೆ ಇಲ್ಲದೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದೇ ಇಲ್ಲ. ವಿದೇಶಗಳಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಿಸಿರುವುದಾಗಿ ‘ಸರ್‌’ ಹೇಳುತ್ತಿದ್ದಾರೆ. ಆದರೆ ದೇಶದಲ್ಲಿ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಇವರಿಗೆ ಆಗುತ್ತಿಲ್ಲ’ ಎಂದು ನರೇಂದ್ರ ಮೋದಿ ಅವರ ಕಾಲೆಳೆದಿದೆ.

ಈ ಆರೋಪಗಳ ಕುರಿತು ಪಿಟಿಐಗೆ ಪ್ರತಿಕ್ರಿಯಿಸಿರುವ ಎನ್‌ಟಿಎ ಅಧಿಕಾರಿಗಳು, ‘ಈ ಬಾರಿಯ ಪ್ರಶ್ನೆ ಪತ್ರಿಕೆಯನ್ನು ಎನ್‌ಸಿಇಆರ್‌ಟಿ ಪಠ್ಯಕ್ರಮ ಆಧರಿಸಿ ಸಿದ್ಧಪಡಿಸಲಾಗಿತ್ತು. ಆದರೆ ಬಹಳಷ್ಟು ವಿದ್ಯಾರ್ಥಿಗಳು ಹಳೇ ಪಠ್ಯಪುಸ್ತಕವನ್ನೇ ಓದಿದ್ದರಿಂದ ಸಮಸ್ಯೆ ಉಂಟಾಗಿತ್ತು. ಜತೆಗೆ ಪರೀಕ್ಷೆಗೆ ಹಾಜರಾಗಿದ್ದ ಕೆಲ ವಿದ್ಯಾರ್ಥಿಗಳಿಗೆ ಲಭ್ಯವಾದ ಸಮಯ ಕಡಿಮೆಯಾಗಿದ್ದ ಕಾರಣ, 2018ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಂತೆ ಕೆಲ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಆ ಸೂತ್ರದಂತೆಯೇ ಹೆಚ್ಚುವರಿಿ ಅಂಕಗಳನ್ನು ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಈ ಮೇಲಿನ ಎರಡು ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎನ್‌ಟಿಎ 5 ಹೆಚ್ಚುವರಿಿ ಅಂಕಗಳನ್ನು ನೀಡಿದೆ. ಇದರಿಂದಾಗಿ, 44 ವಿದ್ಯಾರ್ಥಿಗಳ ಅಂಕ 715ರಿಂದ 720ಕ್ಕೆ ಏರಿಕೆಯಾಗಿದೆ. ಹೀಗಾಗಿ ಟಾಪರ್‌ಗಳ ಸಂಖ್ಯೆಯೂ ಈ ಬಾರಿ ಏರಿಕೆಯಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.