ನವದೆಹಲಿ : 2024–25ನೇ ಶೈಕ್ಷಣಿಕ ಸಾಲಿನಿಂದ ಆರಂಭವಾಗುವ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳ ಮಿತಿಯನ್ನು ಗರಿಷ್ಠ 150ಕ್ಕೆ ನಿಗದಿಪಡಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಸೀಟು ಹೆಚ್ಚಳದ ನಿರೀಕ್ಷೆಯಲ್ಲಿದ್ದ ವೈದ್ಯಕೀಯ ಕಾಲೇಜುಗಳ ಆಸೆಗೆ ಈ ಮಾರ್ಗಸೂಚಿಯು ತಣ್ಣೀರೆರಚಿದೆ.
‘ರಾಜ್ಯಗಳಲ್ಲಿರುವ 10 ಲಕ್ಷ ಜನಸಂಖ್ಯೆಗೆ 100 ವೈದ್ಯಕೀಯ ಪದವಿ ಸೀಟುಗಳು’ ಎಂಬ ಅನುಪಾತಕ್ಕೆ ಅನುಗುಣವಾಗಿ ಈ ಮಾನದಂಡ ರೂಪಿಸಲಾಗಿದೆ. ಹೊಸ ವೈದ್ಯಕೀಯ ಕಾಲೇಜುಗಳಲ್ಲಿನ ವೈದ್ಯಕೀಯ ಪದವಿ ಕೋರ್ಸ್, ಹೊಸ ವೈದ್ಯಕೀಯ ಕೋರ್ಸ್ ಆರಂಭ, ಹಾಲಿ ಇರುವ ಸೀಟುಗಳ ಹೆಚ್ಚಳ, ಮೌಲ್ಯಮಾಪನ ಮತ್ತು ಮೌಲ್ಯಾಂಕನ ನಿಯಮಗಳಿಗೆ ಸಂಬಂಧಿಸಿದಂತೆ ಆಗಸ್ಟ್ 16ರಂದು ಆಯೋಗ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಈ ಬಗ್ಗೆ ವಿವರಿಸಲಾಗಿದೆ.
ಯಾವುದೇ ಕಾಲೇಜಿಗೆ ಹೆಚ್ಚುವರಿಯಾಗಿ ಅನುಮತಿಸಿದ ಕೋಟಾ ಸೀಟುಗಳು ಕೂಡ ಕಾಲೇಜಿಗೆ ಮಂಜೂರು ಮಾಡಿರುವ ಒಟ್ಟು ಸೀಟುಗಳ ಮಿತಿಯನ್ನು ಮೀರಬಾರದು ಎಂದು ಹೇಳಲಾಗಿದೆ.
2023–24ನೇ ಶೈಕ್ಷಣಿಕ ಸಾಲಿನಡಿ ಎಂಬಿಬಿಎಸ್ ಸೀಟುಗಳ ಹೆಚ್ಚಳಕ್ಕೆ ಅರ್ಜಿ ಸಲ್ಲಿಸಿರುವ ಕಾಲೇಜುಗಳಿಗೂ ಈ ಮಾರ್ಗಸೂಚಿ ಅನ್ವಯಿಸುತ್ತದೆ. ಈ ಹಿಂದಿನ ವರ್ಷದಲ್ಲಿ ಸಲ್ಲಿಸಿದ್ದ ಅರ್ಜಿಯ ಅನುಸಾರ (ಒಟ್ಟು 200 ಅಥವಾ 250) ಸೀಟುಗಳನ್ನು 2024–25ನೇ ಸಾಲಿನಡಿ ಹೆಚ್ಚಿಸುವಂತೆ ಮನವಿ ಮಾಡಬಹುದಾಗಿದೆ. ಆದರೆ, ಸೀಟು ಹೆಚ್ಚಳವಾಗುತ್ತದೆ ಎಂಬ ಯಾವುದೇ ಭರವಸೆ ಇಲ್ಲ ಎನ್ನಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆದಿರುವ ಹೊಸ ವೈದ್ಯಕೀಯ ಕಾಲೇಜುಗಳಿಗೆ ಮೊದಲ ಮೂರು ವರ್ಷಗಳಲ್ಲಿ ಅನುಕ್ರಮವಾಗಿ 50, 100 ಹಾಗೂ 150 ಸೀಟುಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾರ್ಗಸೂಚಿ ಹೇಳಿದೆ.
ಮಾರ್ಗಸೂಚಿಯಲ್ಲಿ ಏನಿದೆ?
* ಹೊಸ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸುಸಜ್ಜಿತ ಆಸ್ಪತ್ರೆ ಇರಬೇಕು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರಬೇಕು.
* ಆಸ್ಪತ್ರೆಯು ಕನಿಷ್ಠ 220 ಹಾಸಿಗೆ ಸಾಮರ್ಥ್ಯ ಹೊಂದಿರಬೇಕು. ಕಾಲೇಜು ಮತ್ತು ಆಸ್ಪತ್ರೆ ನಡುವೆ ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿಯ ಪ್ರಯಾಣದ ಅಂತರ 30 ನಿಮಿಷಕ್ಕೂ ಹೆಚ್ಚಿರಬಾರದು
* ಸಹಾಯಕ ವೈದ್ಯರಿಗೆ ನೆರವಾಗುವಂತೆ ಕಾಲೇಜಿನ ವ್ಯಾಪ್ತಿಯಲ್ಲಿ ಗ್ರಾಮೀಣ ಆರೋಗ್ಯ ಕೇಂದ್ರಗಳು/ ಸಮುದಾಯ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು ಇರಬೇಕು
* ಪ್ರತಿ ವೈದ್ಯಕೀಯ ಸಂಸ್ಥೆಯಲ್ಲೂ ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ಪೂರಕವಾಗುವಂತಹ ಸುಸಜ್ಜಿತ ಪ್ರಯೋಗಾಲಯ ಇರಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.