ನವದೆಹಲಿ: ಅಖಿಲ ಭಾರತೀಯ ಕೋಟಾದಡಿ ವೈದ್ಯಕೀಯ ಶಿಕ್ಷಣ ಪ್ರವೇಶಾತಿಯಲ್ಲಿ (ನೀಟ್) ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳಿಗೆ ಶೇಕಡ 27ರಷ್ಟು ಮೀಸಲಾತಿ ಅನ್ವಯವಾಗಲಿದೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಗುರುವಾರ ಮೀಸಲಾತಿ ಕಲ್ಪಿಸುವ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ (ಇಡಬ್ಲ್ಯುಎಸ್) ಅಖಿಲ ಭಾರತೀಯ ಕೋಟಾದಡಿ ಶೇಕಡ 10ರಷ್ಟು ಮೀಸಲಾತಿ ಅನ್ವಯವಾಗಲಿದೆ. ವೈದ್ಯಕೀಯ, ದಂತವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಹೊಸ ಮೀಸಲಾತಿಯು ಅನ್ವಯವಾಗಲಿದೆ.
2021–22 ಶೈಕ್ಷಣಿಕ ವರ್ಷದಿಂದ ಎಂಬಿಬಿಎಸ್, ಎಂಡಿ, ಎಂಎಸ್, ಬಿಡಿಎಸ್, ಎಂಡಿಎಸ್ ಹಾಗೂ ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್ ಸಂಬಂಧಿತ ಡಿಪ್ಲೊಮಾ ಪ್ರವೇಶಾತಿಯಲ್ಲಿ ಹೊಸ ಮೀಸಲಾತಿ ನಿರ್ಧಾರ ಅನ್ವಯವಾಗಲಿದೆ.
'ಇದರಿಂದಾಗಿ ಸುಮಾರು 5,550 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಹಿಂದುಳಿದ ವರ್ಗಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರ ಉನ್ನತಿಗಾಗಿ ಮೀಸಲಾತಿ ಕಲ್ಪಿಸುವಲ್ಲಿ ಸರ್ಕಾರ ಬದ್ಧವಾಗಿದೆ' ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಮಾನಸುಖ್ ಮಾಂಡವಿಯಾ ಟ್ವೀಟಿಸಿದ್ದಾರೆ.
ಈ ನಿರ್ಧಾರದಿಂದ ಎಂಬಿಬಿಎಸ್ ಸೇರುವ 1,500 ಹಾಗೂ ಸ್ನಾತಕೋತ್ತರ ಪದವಿಯಲ್ಲಿ 2,500 ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ 550 ವಿದ್ಯಾರ್ಥಿಗಳು ಎಂಬಿಬಿಎಸ್‌ನಲ್ಲಿ ಮತ್ತು 1,000 ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಅನುವಾಗಲಿದೆ ಎಂದು ಕೇಂದ್ರ ಸಚಿವಾಲಯದ ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.