ನವದೆಹಲಿ: ಕಾಲೇಜು ತರಗತಿಯ ಅವಧಿಯಲ್ಲಿ ವೈದ್ಯಕೀಯ ಕಾಲೇಜಿನ ಬೋಧಕ ಸಿಬ್ಬಂದಿ ಖಾಸಗಿ ವೈದ್ಯಕೀಯ ಅಭ್ಯಾಸದಲ್ಲಿ ತೊಡಗುವುದನ್ನು ನಿರ್ಬಂಧಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗವು, ಬೋಧಕ ಸಿಬ್ಬಂದಿಗೆ ಶೇ 75 ಹಾಜರಾತಿಯನ್ನು ಕಡ್ಡಾಯಗೊಳಿಸಿದೆ.
2023ನೇ ಸಾಲಿನ ಸ್ನಾತಕೋತ್ತರ ಪಠ್ಯಕ್ರಮಗಳಿಗೆ ಕನಿಷ್ಠ ಗುಣಮಟ್ಟದ ಅಗತ್ಯತೆಗಳ ಮಾರ್ಗಸೂಚಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಕಳೆದ ವಾರ ಬಿಡುಗಡೆ ಮಾಡಿದೆ.
‘ವೈದ್ಯಕೀಯ ಕಾಲೇಜಿನಲ್ಲಿ ಪೂರ್ಣಾವಧಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯು ಕಾಲೇಜು ಅವಧಿಯಲ್ಲಿ ಖಾಸಗಿ ವೈದ್ಯಕೀಯ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬಾರದು. ಒಟ್ಟಾರೆ ಕೆಲಸದ ದಿನಗಳ ಪೈಕಿ ಬೋಧಕ ಸಿಬ್ಬಂದಿಯು ಶೇ 75ರಷ್ಟು ಹಾಜರಾತಿ ಹೊಂದಿರಲೇಬೇಕು’ ಎಂದು ಈ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಒಳರೋಗಿಗಳಿಗೆ ಮೀಸಲಾಗಿರುವ ಆಸ್ಪತ್ರೆಯ ಹಾಸಿಗೆಗಳ ಪೈಕಿ ಶೇ 80ರಷ್ಟು ಹಾಸಿಗೆಗಳು ವರ್ಷಪೂರ್ತಿ ಭರ್ತಿಯಾಗಿರಬೇಕು. ಸ್ನಾತಕೋತ್ತರ ತರಬೇತಿ ಇಲಾಖೆಗೆ ಮೀಸಲಾಗಿರುವ ಒಟ್ಟಾರೆ ಬೆಡ್‌ಗಳ ಪೈಕಿ ಶೇ 15ರಷ್ಟು ಐಸಿಯುಗೆ ಮೀಸಲಿಡಬೇಕು ಎಂದು ಮಾರ್ಗಸೂಚಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.