ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ: ಪ್ರಮುಖ ಆರೋಪಿಗೆ ಸುಳ್ಳು ಪತ್ತೆ ಪರೀಕ್ಷೆ

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ: ನ್ಯಾಯಾಲಯ ಅನುಮತಿ

ಪಿಟಿಐ
Published 23 ಆಗಸ್ಟ್ 2024, 15:52 IST
Last Updated 23 ಆಗಸ್ಟ್ 2024, 15:52 IST
ವೈದ್ಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ನವದೆಹಲಿಯಲ್ಲಿ ವಕೀಲರು ಶುಕ್ರವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ವೈದ್ಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ನವದೆಹಲಿಯಲ್ಲಿ ವಕೀಲರು ಶುಕ್ರವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ/ ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿ ಸಂಜಯ್‌ ರಾಯ್‌ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಕೋಲ್ಕತ್ತದ ವಿಶೇಷ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌.ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಹಾಗೂ ಇತರ ನಾಲ್ವರು ವೈದ್ಯರ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ನ್ಯಾಯಾಲಯ ಈಗಾಗಲೇ ಅನುಮತಿ ನೀಡಿದೆ.

ವೈದ್ಯ ವಿದ್ಯಾರ್ಥಿನಿಯ ಮೃತದೇಹದ ಬಳಿ ದೊರೆತಿದ್ದ ಬ್ಲೂಟೂತ್‌ ಸಾಧನ ಮತ್ತು ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದರು. ಸಂಜಯ್‌ ರಾಯ್‌, ಸೆಮಿನಾರ್‌ ಹಾಲ್‌ಗೆ ಪ್ರವೇಶಿಸಿದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೆಹಲಿಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲದ (ಸಿಎಫ್‌ಎಸ್‌ಎಲ್‌) ತಜ್ಞರ ತಂಡವು ಸುಳ್ಳು ಪತ್ತೆ ಪರೀಕ್ಷೆ ನಡೆಸಲಿದೆ.

ADVERTISEMENT

ಹಣಕಾಸಿನ ಅವ್ಯವಹಾರ ತನಿಖೆ ಸಿಬಿಐಗೆ ವರ್ಗಾವಣೆ: ಆರ್‌.ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಗಳ ಕುರಿತ ತನಿಖೆಯನ್ನು ಎಸ್‌ಐಟಿಯಿಂದ ಸಿಬಿಐಗೆ ವರ್ಗಾಯಿಸುವಂತೆ ಕಲ್ಕತ್ತ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಕಾಲೇಜಿನ ಮಾಜಿ ಉಪ ಅಧೀಕ್ಷಕ ಅಖ್ತರ್‌ ಅಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ. ತನಿಖೆಯ ಪ್ರಗತಿಗೆ ಸಂಬಂಧಿಸಿದ ವರದಿಯನ್ನು ಮೂರು ವಾರಗಳ ಒಳಗಾಗಿ ಸಲ್ಲಿಸುವಂತೆ ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್‌ ಅವರು ಸಿಬಿಐಗೆ ನಿರ್ದೇಶಿಸಿದ್ದಾರೆ.

ನಿರಾಸೆ ಉಂಟಾಗಿದೆ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸುರಕ್ಷತೆಗೆ ತೆಗೆದುಕೊಂಡಿರುವ ಕ್ರಮಗಳನ್ನು ನೋಡುವಾಗ ನಿರಾಸೆಯ ಭಾವನೆ ಮೂಡುತ್ತದೆ ಎಂದು ಆರ್‌.ಜಿ ಕರ್ ಆಸ್ಪತ್ರೆಯ ಸ್ಥಾಪಕ ಡಾ.ರಾಧಾ ಗೋವಿಂದ ಕರ್ ಅವರ ವಂಶಸ್ಥರಾದ ಪಾರ್ಥ ಕರ್‌ ಹೇಳಿದ್ದಾರೆ.

ಆರ್‌.ಜಿ ಕರ್‌ ಅವರ 172ನೇ ಜನ್ಮದಿನದ ಅಂಗವಾಗಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಲಭಿಸಿ ಸುಮಾರು ಎಂಟು ದಶಕಗಳು ಕಳೆದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ರೋಗಿಗಳು ಸೌಲಭ್ಯಗಳ ಕೊರತೆ ಎದುರಿಸುತ್ತಿರುವುದು ನೋವಿನ ಸಂಗತಿ’ ಎಂದಿದ್ದಾರೆ.

‘ಬಾಗಿಲಿನ ಚಿಲಕ ಮುರಿದಿತ್ತು’

ವೈದ್ಯ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದ ಸೆಮಿನಾರ್‌ ಹಾಲ್‌ನ ಬಾಗಿಲಿನ ಚಿಲಕ ಮುರಿದಿರುವುದು ಕಂಡುಬಂದಿದ್ದು ಯಾವುದೇ ಅಡೆತಡೆಯಿಲ್ಲದೆ ಅಪರಾಧ ಕೃತ್ಯ ಹೇಗೆ ನಡೆಯಿತು ಎಂಬುದರ ಕುರಿತು ತನಿಖೆಯನ್ನು ಕೇಂದ್ರೀಕರಿಸಿದ್ದೇವೆ’ ಎಂದು ಸಿಬಿಐನ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದರು. ವೈದ್ಯ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ನಡೆದಾಗ ಸೆಮಿನಾರ್ ಹಾಲ್‌ನಿಂದ ಯಾರಿಗೂ ಯಾವುದೇ ಶಬ್ದ ಏಕೆ ಕೇಳಿಸಲಿಲ್ಲ ಎಂಬ ಬಗ್ಗೆ ತನಿಖಾಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದರು. ‘ಬಾಗಿಲಿನ ಚಿಲಕ ಕೆಲ ದಿನಗಳ ಹಿಂದೆಯೇ ಮುರಿದಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಂತ್ರಸ್ತೆಯು ನಿದ್ದೆ ಮಾಡಲು ಆಗಸ್ಟ್ 9ರ ಬೆಳಗಿನ ಜಾವ 2 ರಿಂದ 3ರ ನಡುವೆ ಸೆಮಿನಾರ್‌ ಹಾಲ್‌ ಪ್ರವೇಶಿಸಿದ್ದಾರೆ. ಚಿಲಕ ಮುರಿದಿದ್ದ ಕಾರಣ ಅವರಿಗೆ ಬಾಗಿಲು ಭದ್ರಪಡಿಸಲು ಆಗಿರಲಿಲ್ಲ’ ಎಂದು ಹೇಳಿದರು.  ‘ಅಪರಾಧ ನಡೆದಾಗ ಆರೋಪಿಯ ರಕ್ಷಣೆಗೆ ಯಾರಾದರೂ ಸೆಮಿನಾರ್‌ ಹಾಲ್‌ನ ಹೊರಗಡೆ ಕಾವಲು ನಿಂತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

ದಿನದ ಬೆಳವಣಿಗೆ

* ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಕೊಲೆ ಘಟನೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರ 15ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದಾದ್ಯಂತ ಶುಕ್ರವಾರವೂ ವೈದ್ಯಕೀಯ ಸೇವೆಗಳು ಏರುಪೇರಾದವು. * ಕೆಲಸಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ನ ಮನವಿಯ ಹೊರತಾಗಿಯೂ ವೈದ್ಯರು ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದಾರೆ. 

* ಸುಪ್ರೀಂ ಕೋರ್ಟ್‌ನ ಮನವಿಯಂತೆ ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​(ಫೋರ್ಡಾ) ಮುಷ್ಕರವನ್ನು ವಾಪಸ್‌ ಪಡೆದುಕೊಂಡಿದೆ. ನವದೆಹಲಿಯಲ್ಲಿ ಎಲ್ಲ ಸದಸ್ಯರು ಪ್ರತಿಭಟನೆ ಕೈಬಿಟ್ಟು ಶುಕ್ರವಾರ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಅಸೋಸಿಯೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.

* ಮುಷ್ಕರಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದೇವೆಯೇ ಹೊರತು ಪೂರ್ಣವಾಗಿ ವಾಪಸ್‌ ಪಡೆದಿಲ್ಲ. ನಮ್ಮ ಬೇಡಿಕೆಗಳು ಈಡೇರುವುದೇ ಎಂಬುದನ್ನು ಎರಡು ವಾರಗಳ ಕಾಲ ಸೂಕ್ಷ್ಮವಾಗಿ ಗಮನಿಸಿ ಆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಫೋರ್ಡಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.