ಮುಂಬೈ: ಕೆದರಿದ ಕೂದಲು, ಮೈಮುಚ್ಚಲು ಹರಿದ ಬಟ್ಟೆ ಧರಿಸಿ, ಆಹಾರ, ಹಣಕ್ಕಾಗಿ ಅಂಗಲಾಚುವ ಭಿಕ್ಷುಕರನ್ನು ಸಾಮಾನ್ಯವಾಗಿ ನಾವೆಲ್ಲ ನೋಡಿರುತ್ತೇವೆ. ಆದರೆ ಇಲ್ಲಿನ ಬೀದಿಗಳಲ್ಲಿ ಭಿಕ್ಷಾಟನೆ ಮಾಡುವ ಭರತ್ ಜೈನ್ ಎಂಬುವವರು ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಿಕ್ಷುಕನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಭಿಕ್ಷಾಟನೆಯ ಮೂಲಕವೇ ಭರತ್ ಅವರು ₹7.5 ಕೋಟಿ ಸಂಪಾದಿಸಿದ್ದಾರೆ. ತಿಂಗಳಿಗೆ ₹60ಸಾವಿರದಿಂದ ₹75ಸಾವಿರದವರೆಗೂ ಗಳಿಸುತ್ತಾರೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ತನ್ನ ವರದಿಯಲ್ಲಿ ಹೇಳಿದೆ.
ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣವನ್ನೂ ಪಡೆಯಲು ಸಾಧ್ಯವಾಗದ ಭರತ್ ಅವರು ಇಂದು ಮುಂಬೈನಲ್ಲಿ ₹1.2 ಕೋಟಿ ಮೌಲ್ಯದ ಎರಡು ಬಿಎಚ್‌ಕೆ ಫ್ಲ್ಯಾಟ್‌ನ ಒಡೆಯರಾಗಿದ್ದಾರೆ. ಠಾಣೆಯಲ್ಲಿ ಎರಡು ಅಂಗಡಿಗಳನ್ನು ತಿಂಗಳಿಗೆ ₹30 ಸಾವಿರಕ್ಕೆ ಬಾಡಿಗೆಗೆ ನೀಡಿದ್ದಾರೆ ಎಂದೂ ತಿಳಿಸಿದೆ.
ಪತ್ನಿ, ಇಬ್ಬರು ಮಕ್ಕಳು, ಸಹೋದರ ಮತ್ತು ತಂದೆಯೊಂದಿಗೆ ವಾಸವಿರುವ ಭರತ್ ಅವರು, ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ ಅಥವಾ ಆಜಾದ್ ಮೈದಾನ್ ಬಳಿ ಭಿಕ್ಷೆ ಬೇಡುತ್ತಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಸಾಕಷ್ಟು ಹಣ ಆಸ್ತಿ ಹೊಂದಿದ್ದರೂ ಭರತ್ ಅವರು ಈಗಲೂ ಭಿಕ್ಷಾಟನೆಯನ್ನು ಮುಂದುವರಿಸಿದ್ದಾರೆ.
ಜೈನ್ ಅವರು ಸದ್ಯ ಪರೇಲ್‌ನಲ್ಲಿ 1ಬಿಎಚ್‌ಕೆ ಡ್ಯುಪ್ಲೆಕ್ಸ್ ಮನೆಯಲ್ಲಿ ವಾಸವಿದ್ದು, ಅವರ ಮಕ್ಕಳು ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪೂರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.