ರಂಜನ್ ಗೊಗೊಯಿ
ಸುಪ್ರೀಂ ಕೋರ್ಟ್‌ನ 46ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯಿ ಅವರು 1978ರಲ್ಲಿ ವಕೀಲರಾಗಿ ಕೆಲಸ ಆರಂಭಿಸಿದರು. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಸೇರಿದಂತೆ ಮೈಲಿಗಲ್ಲು ಎನಿಸುವ ಪ್ರಕರಣಗಳ ತೀರ್ಪು ನೀಡಿದ್ದಾರೆ.
ಹಿಂದಿನ ಸಿಜೆಐ ದೀಪಕ್ ಮಿಶ್ರಾ ಅವರು ಪ್ರಕರಣಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ನಾಲ್ವರು ನ್ಯಾಯಮೂರ್ತಿಗಳಲ್ಲಿ ಇವರೂ ಒಬ್ಬರು.
ಎಸ್.ಎ. ಬೊಬಡೆ
ನಾಗಪುರ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಬೊಬಡೆ 1978ರಲ್ಲಿ ಮಹಾರಾಷ್ಟ್ರದಲ್ಲಿ ವಕೀಲಿ ವೃತ್ತಿ ಶುರು ಮಾಡಿದರು. ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ಕೆಲಸ ಮಾಡಿದ್ದಾರೆ. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ, 2013ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಮಾತೆ ಮಹಾದೇವಿ ಅವರ ಪುಸ್ತಕವನ್ನು ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಪೀಠದಲ್ಲಿ ಬೊಬಡೆ ಇದ್ದರು.
ಸುಪ್ರೀಂಕೋರ್ಟ್‌ನ ಮುಂದಿನ ಸಿಜೆಐ ಆಗಿ ನೇಮಕಗೊಂಡಿದ್ದು, ನ.18ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಏಪ್ರಿಲ್ 2021ರಲ್ಲಿ ನಿವೃತ್ತರಾಗಲಿದ್ದಾರೆ.
ಅಶೋಕ್ ಭೂಷಣ್
ಅಲಹಾಬಾದ್ ವಿಶ್ವವಿದ್ಯಾಲಯದಿಂದ ಪದವಿ ಪಡೆದು, ಉತ್ತರ ಪ್ರದೇಶ ಬಾರ್ ಕೌನ್ಸಿಲ್‌ನಲ್ಲಿ 1979ರಲ್ಲಿ ವಕೀಲರಾಗಿ ಕೆಲಸ ಶುರು ಮಾಡಿದರು. 2001ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡ ಭೂಷಣ್, 2016ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದರು. ಇದಕ್ಕೂ ಮುನ್ನ ಕೇರಳ ಹೈಕೋರ್ಟ್‌ನ 31ನೇ ಮುಖ್ಯನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆಧಾರ್ ಕಾಯ್ದೆ, ದೆಹಲಿಗೆ ವಿಶೇಷ ಕಾಯ್ದೆ, ಸಂಸದೀಯ ವರದಿಗಳ ನ್ಯಾಯಾಂಗ ಪ್ರಸ್ತುತತೆ, ಕಾನೂನುಬಾಹಿರ ಚಟುವಟಿಕೆ ತಡೆ ತಿದ್ದುಪಡಿ ಕಾಯ್ದೆಯಂತಹ ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾರೆ.
ಡಿ.ವೈ. ಚಂದ್ರಚೂಡ್
ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಹಾಗೂ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಡಿ.ವೈ. ಚಂದ್ರಚೂಡ್ ಅವರು 2016ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. ‘ವ್ಯಭಿಚಾರ’ ಕಾನೂನು ಕುರಿತು ತಮ್ಮ ತಂದೆ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್ ನೀಡಿದ್ದ ತೀರ್ಪು ಸೇರಿದಂತೆ ಹಲವು ಕಾಯ್ದೆಗಳನ್ನು ಇವರು ರದ್ದುಗೊಳಿಸಿದ್ದಾರೆ.
ಎಸ್. ಅಬ್ದುಲ್ ನಜೀರ್
ಐತಿಹಾಸಿಕ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಎಸ್.ಅಬ್ದುಲ್ ನಜೀರ್ ಕರ್ನಾಟಕದವರು. ಇವರು ಕಾರ್ಕಳ ಸಮೀಪದ ಬೆಳುವಾಯಿ ಗ್ರಾಮದವರು.
ಕರ್ನಾಟಕ ಹೈಕೋರ್ಟ್‌ನಲ್ಲಿ 20 ವರ್ಷ ವಕೀಲರಾಗಿದ್ದ ಅಬ್ದುಲ್ ನಜೀರ್ ಅವರನ್ನು 2017ರ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು.
‘ಖಾಸಗಿತನವು ವ್ಯಕ್ತಿಯ ಮೂಲಭೂತ ಹಕ್ಕು’ ಎಂದು 2017ರಲ್ಲಿ ತೀರ್ಪು ನೀಡಿದ ಒಂಬತ್ತು ನ್ಯಾಯಮೂರ್ತಿಗಳ ಪೀಠದಲ್ಲಿ ಇವರಿದ್ದರು. ತ್ರಿವಳಿ ತಲಾಖ್‌ನ ಸಾಂವಿಧಾನಿಕ ಮಾನ್ಯತೆ ಕುರಿತು ವಿಚಾರಣೆ ನಡೆಸಿದ ಪೀಠದ ಭಾಗವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.