ADVERTISEMENT

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ: ತಮಿಳುನಾಡಿನಲ್ಲಿ ಮೈತ್ರಿಗೆ ‘ಸೈ’ ಎಂದ ಸೆಲ್ವಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2024, 13:05 IST
Last Updated 10 ಫೆಬ್ರುವರಿ 2024, 13:05 IST
ಪನ್ನೀರಸೆಲ್ವಂ
ಪನ್ನೀರಸೆಲ್ವಂ   

ಚೆನ್ನೈ: ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಎಐಎಡಿಎಂಕೆ ಉಚ್ಚಾಟಿತ ನಾಯಕ, ಮಾಜಿ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾತುಕತೆ ಅಂತಿಮಗೊಂಡಿದ್ದು, ಈ ಕುರಿತು ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ರಾಜ್ಯದಲ್ಲಿ ಮಹಾಮೈತ್ರಿಕೂಟ ರಚಿಸಲಾಗುವುದು’ ಎಂದು ತಿಳಿಸಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದೊಂದಿಗಿನ ನಾಲ್ಕು ವರ್ಷಗಳ ಮೈತ್ರಿಯಿಂದ ಹೊರ ಬಂದಿರುವುದಾಗಿ 2023ರ ಸೆಪ್ಟೆಂಬರ್‌ನಲ್ಲಿ ಎಐಎಡಿಎಂಕೆ ಹೇಳಿಕೊಂಡಿತ್ತು. ಜತೆಗೆ, 2024ರ ಲೋಕಸಭಾ ಚುನಾವಣೆಯನ್ನು ಪ್ರತ್ಯೇಕವಾಗಿ ಎದುರಿಸಲು ಯೋಜನೆ ರೂಪಿಸಲಾಗುವುದು ಎಂದು ಪಕ್ಷ ಹೇಳಿತ್ತು.

ADVERTISEMENT

ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಅಧ್ಯಕ್ಷ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದಲ್ಲಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಪಕ್ಷದ ಈ ನಿರ್ಧಾರವನ್ನು ಸಂಭ್ರಮಿಸಿರುವ ದ್ರಾವಿಡ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಆ ಪಕ್ಷವನ್ನು ಮುನ್ನಡೆಸುತ್ತಿರುವ ರೀತಿ ಕುರಿತು ಪಳನಿಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕರೆ ಮಾಡಿ ವಿವರಿಸಿದ ನಂತರ, ಎನ್‌ಡಿಎಯಿಂದ ಹೊರ ಹೋಗುವ ಇಂಗಿತ ವ್ಯಕ್ತಪಡಿಸಿದ್ದರು.

ದ್ರಾವಿಡ ಮುಖಂಡ ಸಿ.ಎನ್. ಅಣ್ಣಾದೊರೈ ವಿರುದ್ಧ ಹೇಳಿಕೆಗೆ ಅಣ್ಣಾಮಲೈ ಕ್ಷಮೆ ಕೋರುವಂತೆ ಪಕ್ಷ ಆಗ್ರಹಿಸಿತ್ತು. ಎನ್‌ಡಿಎ ಒಕ್ಕೂಟದಿಂದ ಹೊರ ನಡೆಯುವ ನಿರ್ಣಯವನ್ನು ಪಕ್ಷವು ಸರ್ವಾನುಮತದಿಂದ ಅಂಗೀಕರಿಸಿತ್ತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಮಾನ ಮನಸ್ಕ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯಿತು’ ಎಂದು ಪಕ್ಷದ ಹಿರಿಯ ಮುಖಂಡ ಕೆ.ಪಿ. ಮುನುಸ್ವಾಮಿ ತಿಳಿಸಿದ್ದರು.

ಎನ್‌ಡಿಎ ಜತೆಗಿನ ಮೈತ್ರಿ ಅಂತ್ಯಕ್ಕೆ ಕಾರಣವೇನು ಎಂಬುದರ ಕುರಿತು ಅವರು ಏನನ್ನೂ ಹೇಳಿರಲಿಲ್ಲ. ಆದರೆ ರಾಜ್ಯದಲ್ಲಿನ ಬಿಜೆಪಿ ನಾಯಕತ್ವ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಲಾಗಿದೆ ಎಂದಿದ್ದರು.

ಅಣ್ಣಾದೊರೈ ಹಾಗೂ ಜೆ.ಜಯಲಲಿತಾ ಅವರನ್ನು ರಾಜ್ಯದಲ್ಲಿರುವ ಬಿಜೆಪಿ ನಾಯಕರು ಅವಮಾನಿಸಿದ್ದಾರೆ. ಮಧುರೈನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಎಐಎಡಿಎಂಕೆಯನ್ನು ಕಡೆಗಣಿಸಿ, ಅದರ ನೀತಿಗಳನ್ನು ಬಿಜೆಪಿ ನಾಯಕರು ಟೀಕಿಸಿದ್ದರು. ಕಳೆದ ಒಂದು ವರ್ಷದಿಂದ ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಈ ಎಲ್ಲಾ ಅಂಶಗಳನ್ನು ಪಕ್ಷವು ತೆಗೆದುಕೊಂಡ ನಿರ್ಣಯದಲ್ಲಿ ಸೇರಿಸಲಾಗಿದೆ ಎಂದು ಮುಖಂಡರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.