ಶಿಲಾಂಗ್: ಮೇಘಾಲಯದ ಪಶ್ಚಿಮ ಗಾರೊ ಪರ್ವತ ಜಿಲ್ಲೆಯಲ್ಲಿ ಗುಂಪೊಂದು ಮಹಿಳೆಯ ಮೇಲೆ ನಡೆಸಿದ ಗಂಭೀರ ಸ್ವರೂಪದ ಹಲ್ಲೆಯನ್ನು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ದಾಡೆಂಗ್ರೆ ಉಪವಿಭಾಗದ ಟೇಕ್ಸಾಗ್ರೆ ಗ್ರಾಮದಲ್ಲಿ ಮಹಿಳೆಯ ಮೇಲೆ ಆರು ಜನರ ಗುಂಪು ಬುಧವಾರ ತೀವ್ರವಾಗಿ ಹಲ್ಲೆ ನಡೆಸಿದೆ. ಇದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತು.
‘ಅವರು ಏನು ಮಾಡಿದ್ದಾರೋ ಅದು ತಪ್ಪು. ಇಂಥ ಯಾವುದೇ ಕೃತ್ಯವನ್ನು ಖಂಡಿಸುತ್ತೇವೆ. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಇಂಥ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಗ್ಮಾ ಸುದ್ದಿಗಾರರಿಗೆ ಹೇಳಿದ್ದಾರೆ.
‘ಹಲ್ಲೆಗೊಳಗಾದ ಮಹಿಳೆಯು ಸುಮಾರು 20 ವರ್ಷದವರಾಗಿದ್ದು ಮಗುವನ್ನು ಹೊಂದಿದ್ದಾರೆ. ಪಂಚಾಯಿತಿ ಕಟ್ಟೆಯಲ್ಲಿ ನಡೆಯುತ್ತಿದ್ದ ಕಾಂಗರೂ ನ್ಯಾಯಾಲಯಕ್ಕೆ (ಜನರ ಗುಂಪು ನಡೆಸುವ ಅನಧಿಕೃತ ನ್ಯಾಯಾಲಯ) ಬರುವಂತೆ ಮಹಿಳೆಗೆ ಆ ಗ್ರಾಮದ ಕೆಲವರು ಹೇಳಿದ್ದರು. ನಂತರ ನಾಲ್ವರು ಪುರುಷರು ಮಹಿಳೆಯ ಮುಡಿಹಿಡಿದು ಹೊರಗೆ ಎಳೆದು ತಂದು, ಆಕೆ ಮೇಲೆ ದೊಣ್ಣೆಯಿಂದ ಮನಸೋಇಚ್ಛೆ ಥಳಿಸಿದ್ದಾರೆ. ಈ ಅಷ್ಟೂ ದೃಶ್ಯಗಳು ಮೊಬೈಲ್‌ನಲ್ಲಿ ದಾಖಲಾಗಿದ್ದು, ಅವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಕೃತ್ಯದಲ್ಲಿ ಭಾಗಿಯಾದ ಮಹಿಳೆಯ ಆರು ಜನ ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಬ್ರಾಹಮ್ ಟಿ. ಸಂಗ್ಮಾ ತಿಳಿಸಿದ್ದಾರೆ. ಗ್ರಾಮದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಉಳಿದವರು ತಾವಾಗಿಯೇ ಠಾಣೆಗೆ ಬಂದು ಶರಣಾಗಿದ್ದಾರೆ.
ರಾಜ್ಯ ಮಹಿಳಾ ಆಯೋಗವು ಘಟನೆ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಸಂತ್ರಸ್ತೆಯನ್ನು ಭೇಟಿಯಾಗಲು ತಂಡವನ್ನು ಕಳುಹಿಸಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.